

ವಿಜಯವಾಣಿ ಸುದ್ದಿಜಾಲ ಧಾರವಾಡ
ವಚನ ಸಾಹಿತ್ಯ ಒಂದು ಮಹಾಸಾಗರ. ಅಕ್ಷಯ ಪಾತ್ರೆ ಕನ್ನಡಿಗರಿಗೆ ಮತ್ತು ಜಗತ್ತಿಗೆ ಬತ್ತಲಾಗದ ಸಾಗರ. ಇಂತಹ ಒಂದು ಸಾಹಿತ್ಯ ನಮಗೆ ಬೇರೊಂದು ಸಿಗುವುದಿಲ್ಲ ಎಂದು ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗುರಪ್ಪ ಹಾಗೂ ಗೌರಮ್ಮ ಬೆಲ್ಲದ ದತ್ತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಮನುಷ್ಯ ಪರಿಕಲ್ಪನೆ ಕುರಿತು ಅವರು ಮಾತನಾಡಿದರು.
ಶರಣರು ಯಾವ ವಿಶ್ವ ವಿದ್ಯಾಲಯಕ್ಕೂ ಹೋದವರಲ್ಲ. ಸುಮಾರು 300 ಜನ ವಚನಕಾರರು ಏಕಕಾಲಕ್ಕೆ ಮನುಷ್ಯ ಬದುಕಿನ ಸಂವೇದನೆಗಳನ್ನು ಸಮಕಾಲೀನ ಜನಕ್ಕೆ ತಲುಪಿಸುವ ಕಾರ್ಯ ಮಾಡುತ್ತಲೇ ಒಳ್ಳೆಯ ಭಾಷೆ ಬಳಸಿಕೊಂಡರು. ಜಗತ್ತಿನ ಸಾಹಿತ್ಯದಲ್ಲಿ ಜನಸಾಮಾನ್ಯರಿಗೆ ಬರೆದಂತಹ ಅಚ್ಚ ಕನ್ನಡದ ಸಾಹಿತ್ಯ ವಚನ ಸಾಹಿತ್ಯ. ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ತಮ್ಮ ಬದುಕನ್ನು ಹಸನ ಮಾಡಿಕೊಂಡವರು ಶರಣರು ಎಂದರು.
ಅಧ್ಯತೆ ವಹಿಸಿದ್ದ ನಾಗರಾಜ ಪಟ್ಟಣಶೆಟ್ಟಿ ಮಾತನಾಡಿ, ಬೆಲ್ಲದ ಮನೆತನ ಮೊದಲಿಂದಲೂ ಒಳ್ಳೆ ಸಂಸ್ಕಾರ ಹೊಂದಿದ್ದು, ರಾಜಕೀಯ, ವ್ಯಾವಹಾರಿಕ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ ಎಂದರು.
ಡಾ. ಗೌರಿ ಬೆಲ್ಲದ ಮಾತನಾಡಿದರು. ದತ್ತಿ ದಾನಿಗಳಾದ ಮಹೇಶ ಬೆಲ್ಲದ, ಪ್ರಶಾಂತ ಬೆಲ್ಲದ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಡಾ. ಶ್ರೀಶೈಲ ಹುದ್ದಾರ, ಡಾ. ಅರವಿಂದ ಯಾಳಗಿ, ಡಾ. ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ರಾಜೇಂದ್ರ ಸಾವಳಗಿ, ಎಸ್.ಜಿ. ಪಾಟೀಲ, ಚಂದ್ರಶೇಖರ ರೊಟ್ಟಿಗವಾಡ, ಶಾರದಾ ಬೆಲ್ಲದ, ಡಾ. ಮಾರ್ಕಂಡೇಯ ದೊಡಮನಿ, ಕೆ. ಎಂ. ಅಂಗಡಿ, ಪ್ರಕಾಶ ಧರಣೆಪ್ಪಗೌಡರ, ಎಸ್.ಕೆ. ಕುಂದರಗಿ, ಇತರರು ಇದ್ದರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.