

ಮಡಿಕೇರಿ:
ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ವಿಶ್ವಮನ್ನಣೆ ತಂದು ಕೊಟ್ಟ ಸಾಹಿತ್ಯದ ತಾಯಿ ಬೇರು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಶನಿವಾರ ನಡೆದ ಮಡಿಕೇರಿಯ ಶರಣ ಮುರುಗೇಶ್ ಅವರು ಸ್ಥಾಪಿಸಿರುವ ಹೆಚ್.ಬಿ.ಶೀಲವಂತ ಮತ್ತು ಸಿದ್ದಲಿಂಗಪ್ರಸಾದ್ ದತ್ತಿ ಶರಣ ಸಂಸ್ಕ್ರತಿ ಪ್ರಸಾರ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿ ಮಾತನಾಡಿದರು.
ಧರ್ಮ, ಗುಡಿ - ಗುಂಡಾರ, ದೇವಾಲಯಗಳನ್ನು ಕೆಡವಿ ಶರೀರವನ್ನೇ ದೇವಾಲಯವಾಗಿಸಿ, ಆತ್ಮಜ್ಞಾನವನ್ನೇ ದೇವರನ್ನಾಗಿಸಿ, ಅರಿವನ್ನು ಗುರುವಾಗಿಸಿದ ವಚನ ಸಾಹಿತ್ಯ ಮಾನವ ಕಲ್ಯಾಣದ ಹಣತೆಯಾಗಿದೆ. ದೇವರ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸುಲಿಗೆ ಮಾಡಿ, ಶೋಷಣೆ ಮಾಡುತ್ತಿದ್ದ ಪೂಜಾರಿಗಳ ಬಣ್ಣ ಬಯಲು ಮಾಡಿದ ವಚನಕಾರರು, ಧರ್ಮದ ಆಚರಣೆಗಳಿಗೆ ದಲ್ಲಾಳಿಗಳ ಅಗತ್ಯವಿಲ್ಲವೆಂದು ಸಾರಿದ ಬಗೆಯನ್ನು ಅನೇಕ ವಚನಗಳ ಮೂಲಕ ಮುನೀರ್ ಅಹಮದ್ ವಿಶ್ಲೇಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಮನುಷ್ಯ ಸದಾಚಾರಗಳ ಮೂಲಕ ಉತ್ತಮವಾದ ಬದುಕು ಕಟ್ಟಿಕೊಳ್ಳಲು ಪ್ರೇರೇಪಣೆ ನೀಡುವ ವಚನಗಳು ಉತ್ತಮ ಸಮಾಜದ ದೀವಿಗೆಗಳಾಗಿವೆ. ಮನುಷ್ಯನ ಜೀವನವೇ ಕ್ಷಣಿಕವಾಗಿರುವ ಈ ಕಾಲಘಟ್ಟದಲ್ಲಿ ಯಾರಿಗೂ ಕೇಡು ಬಯಸದೆ, ಯಾರನ್ನೂ ನೋಯಿಸದೇ ಇರುವುದೇ ಉತ್ತಮ ಜೀವನದ ಪಥವಾಗಬೇಕಿದೆ. ನಾವು ಮಾಡಿದ ಪಾಪ ಕರ್ಮಗಳು ನಮ್ಮನ್ನೇ ಕಾಡುವ ಕಾರಣ ಸಮಾಜದ ಹಿತ ಹಾಗೂ ಮಾನವನ ಕಲ್ಯಾಣಕ್ಕಾಗಿ ಬಸವಣ್ಣನು ಸಾರಿರುವ ಕಲಬೇಡ - ಕೊಲಬೇಡ ಎಂಬ ಸಪ್ತಸೂತ್ರಗಳ ವಚನವೊಂದನ್ನು ನಾವೆಲ್ಲರೂ ಅರಿತು ಅದರ ಸಾರದಂತೆ ನಡೆದರೆ ಅದೇ ಶ್ರೇಷ್ಠ ಬದುಕು ಎಂದರು.
ಶರಣ ಸಾಹಿತ್ಯದ ದತ್ತಿ ದಾನಿ ಕಮಲಾ ಮುರುಗೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಕಲ ಜೀವ ರಾಶಿಗಳಿಗೂ ಕೆಡುಕು ಬಯಸದೇ ಒಳಿತು ಸಾರಿದ ವಚನಕಾರರು ಸಂದೇಶಗಳಲ್ಲಿ ದಯೆ, ಕರುಣೆ, ಸಮಾನತೆಯ ಮಿಳಿತದ ಮಾನವನ ಕಲ್ಯಾಣದ ಆಶಯವಿತ್ತು.
ಆದ್ದರಿಂದ ಇಂದಿನ ಮಕ್ಕಳಲ್ಲಿ ವಚನ ಸಾಹಿತ್ಯ ಹಾಗೂ ವಚನಗಳ ಅರಿವು ಅತ್ಯಗತ್ಯ ಎಂದರು.
ಹಿAದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪಿ.ಪಿ. ಕವಿತಾ ಮಾತನಾಡಿ,
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಅರಿಯಲು ಅನುವಾಗುತ್ತದೆ. ಸಮಾಜದಲ್ಲಿ ಇಂದು ತಾಂಡವವಾಡುತ್ತಿರುವ ಎಲ್ಲಾ ಸಂಕೋಲೆಗಳಿಗೆ ವಚನಗಳ ಅರಿವು ಹಾಗೂ ಆಚರಣೆ ದಿವ್ಯ ಔಷಧಿ ಎಂದರು.
ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಜಾನಪದ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್, ಕೊಡಗು ಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷ ಅಂಬೇಕಲ್ ನವೀನ್, ಶರಣ ಸಾಹಿತ್ಯ ದತ್ತಿ ದಾನಿ ಮುರುಗೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ, ಪ್ರನುತಾ, ಸಿಂಚನ ಇದ್ದರು.
ನೇತ್ರ ತಜ್ಞೆ ವಿಜಯಲಕ್ಷ್ಮಿ ಹಾಗೂ ಕಮಲಾ ಮುರುಗೇಶ್ ವಚನಗಳನ್ನು ವಾಚಿಸಿದರು.