

ಮುಂಡರಗಿ: ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶರಣರು ವಚನ ಕಟ್ಟುಗಳನ್ನು ಅಲ್ಲಲ್ಲಿ ಸಂಗ್ರಹಿಸಿಟ್ಟಿದ್ದರು. ನಶಿಸಿ ಹೋಗುತ್ತಿದ್ದ ಅವುಗಳ ಸಂರಕ್ಷಣೆ ಮಾಡುವಲ್ಲಿ ಫ.ಗು. ಹಳಕಟ್ಟಿ ಅವರ ಶ್ರಮ ಬಹುದೊಡ್ಡದಿದೆ ಎಂದು ಶಸಾಪ ಗದಗ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಶಸಾಪ, ಕದಳಿ ಮಹಿಳಾ ವೇದಿಕೆ, ಕ.ರಾ. ಬೆಲ್ಲದ ಮಹಾವಿದ್ಯಾಲಯ ಹಾಗೂ ಜ.ಅ. ಪ್ರೌಢಶಾಲೆಯ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಪಿತಾಮಹ ಫ.ಗು. ಹಳಕಟ್ಟಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳಕಟ್ಟಿಯವರು ಜನಿಸದಿದ್ದರೆ ಇಷ್ಟು ಪ್ರಮಾಣದಲ್ಲಿ ವಚನ ಸಾಹಿತ್ಯ ಕಾಣಲು ಸಾಧ್ಯವಿರಲಿಲ್ಲ. ವಚನ ಸಾಹಿತ್ಯ ಅಧ್ಯಯನ ಮಾಡಿ ಇತರರಿಗೆ ತಿಳಿಸುವ ಕೆಲಸ ಮಾಡಬೇಕು. ಮಕ್ಕಳು ಬದುಕು ಕಟ್ಟಿಕೊಳ್ಳುವುದಕ್ಕೆ ವಚನ ಸಾಹಿತ್ಯ ಸಹಕಾರಿಯಾಗುತ್ತವೆ. ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿ ಹೆಚ್ಚೆಚ್ಚು ಅಧ್ಯಾಯನ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಶಸಾಪ ಗೌರವಾಧ್ಯಕ್ಷ ಆರ್.ಎಲ್. ಪೊಲೀಸ ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಅಪರೂಪದ ಪ್ರಕಾರವೇ ವಚನ ಸಾಹಿತ್ಯ. ವಚನ ಸಾಹಿತ್ಯ ಬದುಕಿಗೆ ದಾರಿದೀಪ. ಶರಣರು ಸದೃಢ ಸಮಾಜ ಕಟ್ಟುವುದಕ್ಕೆ ವಚನ ಸಾಹಿತ್ಯ ಮಾಧ್ಯಮವಾಗಿಸಿಕೊಂಡರು. ವಚನಗಳ ಬಗ್ಗೆ ಚಿಂತನೆ, ಸಂಶೋಧನೆ ಮಾಡಬೇಕು ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ.ಕುಮಾರ ಜೆ. ಮಾತನಾಡಿ, ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ವಿಶೇಷ ಕೊಡುಗೆಯಾಗಿದೆ. ಚದುರಿದ್ದ ವಚನ ಸಾಹಿತ್ಯ ಒಂದೆಡೆ ಸಂಗ್ರಹಿಸುವ ಕೆಲಸ ಫ.ಗು.ಹಳಕಟ್ಟಿ ಮಾಡಿದರು. ಅವರು ಶರಣರ ಹಾದಿಯಲ್ಲಿ ಬದುಕಿದರು. ಶರಣರ ವಚನಗಳನ್ನು ಸಂಗ್ರಹಿಸಿ ಅದಕ್ಕೆ ಹೊಸತನ ಮೂಡಿಸಿದರು. ವಚನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಸಾಪ ಅಧ್ಯಕ್ಷ ಡಾ.ಸಂತೋಷ ಹಿರೇಮಠ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿದರು. ಮುಖ್ಯಶಿಕ್ಷಕ ಎಸ್.ಸಿ. ಚಕ್ಕಡಿಮಠ, ಬೂದಪ್ಪ ಅಂಗಡಿ, ಎಂ.ಜಿ. ಗಚ್ಚಣ್ಣವರ, ಶೋಭಾ ಮೇಟಿ, ವೀಣಾ ಪಾಟೀಲ, ವೀರಣ್ಣ ಮಡಿವಾಳರ, ಎಸ್.ಆರ್. ಬಸಾಪೂರ, ಶಿಕ್ಷಕರು, ವಿದ್ಯಾರ್ಥಿಗಳು, ಶಸಾಪ, ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ಇತರರು ಇದ್ದರು.
ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾ ಬಸಾಪೂರ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕಿ ದೀಪಶ್ರೀ ಸ್ವಾಗತಿಸಿದರು. ಬಿ.ಟಿ. ಉಳ್ಳಾಗಡ್ಡಿ ನಿರೂಪಿಸಿದರು. ಶಶಿಕಲಾ ಕುಕನೂರ ವಂದಿಸಿದರು.