

ಹುಲಸೂರು: ಎಲ್ಲ ಸಾಹಿತ್ಯಕ್ಕಿಂತಲೂ ವಚನ ಸಾಹಿತ್ಯ ಅದ್ಭುತವಾದ ಶಕ್ತಿ ಅಡಗಿದೆ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಡಾ.ಫ.ಗು ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಮಂಡಳಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಸವಣ್ಣನವರ ನೇತೃತ್ವದಲ್ಲಿ ರಚನೆಯಾದ ಲಿಂಗಾಯತ ಧರ್ಮಕ್ಕೆ ಯಾರು ಕಡೆಗಣಿಸಬಾರದು. ಎಲ್ಲ ಧರ್ಮೀಯರನ್ನು ಗೌರವದಿಂದ ಕಾಣುವ ಧರ್ಮ ಇದಾಗಿದ್ದು, ಸರ್ಕಾರ ಲಿಂಗಾಯಿತ ಎಂಬ ಪದವನ್ನು ತೆಗೆಯಬಾರದು ಎಂದು ಹೇಳಿದರು.
ವಚನ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅನೇಕ ಕಷ್ಟಗಳ ಮಧ್ಯೆ ವಚನಗಳನ್ನು ಒಂದೆಡೆ ಸೇರಿಸಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಯುವಕರು ವಚನ ಸಾಹಿತ್ಯ ಸಂರಕ್ಷಣಾ ದಿನ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಉಸ್ತುರಿ ವಿರಕ್ತಮಠದ ಪೀಠಾಧಿಪತಿ ಶ್ರೀ ಕೋರಣೇಶ್ವರ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ , ಬಸವೇಶ್ವರ ಟ್ರಸ್ಟ್ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಕಾಶ ಖಂಡಾಳೆ, ಶ್ವೇತಾ ಸುನೀಲ ಮಾತನಾಡಿದರು. ವಚನ ಸಾಹಿತ್ಯ ಪಠಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಜಿಪಂ ಮಾಜಿ ಸದಸ್ಯ ಸುದೀರ ಕಾಡಾದಿ, ಜಾಗತಿಕ ಲಿಂಗಾಯತ್ ಮಹಾಸಭಾ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ , ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ , ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಹೊನ್ನಾಡೆ, ಪ್ರಮುಖರಾದ ಶ್ರೀದೇವಿ ನಿಡೋದೆ, ಸಚಿನ ಕೌಟೆ, ಶಿವರಾಜ ಖಪಲೆ ಇತರರಿದ್ದರು. ರಾಜಕುಮಾರ ತೊಂಡಾರೆ ಸ್ವಾಗತಿಸಿ, ನಿರೂಪಣೆ ಮಾಡಿದರು.