ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ವಚನ ಸಾಹಿತ್ಯ-ಸಂವಹನ ಹಾಗೂ ಸಂವಾದ

15
Published on

ಮೈಸೂರು: ಆಡುಭಾಷೆಯಲ್ಲಿ ರಚಿಸಿದ್ದರಿಂದಾಗಿ ವಚನ ಸಾಹಿತ್ಯ ಜನಮಾನಸ ತಲುಪಿತು ಎಂದು ಜೆಎಸ್‌ಎಸ್ ಮಹಿಳಾ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಸುಕನ್ಯಾ ಮಲ್ಲೋಳಿ ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕ, ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಚನ ಸಾಹಿತ್ಯ-ಸಂವಹನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಜನರ ಆಡುಭಾಷೆಯಲ್ಲಿ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ವಚನಗಳನ್ನು ರಚಿಸಿದರು. ಇದರಿಂದಾಗಿ ಅವು ಜನಮನವನ್ನು ತಲುಪಿ, ಸಂವಹನ ಸಾಧ್ಯವಾಯಿತು ಎಂದು ಹೇಳಿದರು.

ಓದಿದರೆ ಗದ್ಯವಾಗುವ, ಹಾಡಿದರೆ ಹಾಡಾಗುವ ಸಾಹಿತ್ಯವೇ ವಚನ ಸಾಹಿತ್ಯ. ಹುಸಿಯ ನುಡಿಯಲು ಬೇಡ, ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ, ಕಾಯಕವೇ ಕೆಲಾಸ…ಮೊದಲಾದ ವಚನಗಳಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಲಾಗಿದೆ. 8 ನೂರು ವರ್ಷಗಳೇ ಕಳೆದಿದ್ದರೂ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ವಚನಗಳಲ್ಲಿರುವ ಸಂದೇಶವನ್ನು ಅರಿತು, ಪಾಲಿಸಬೇಕು ಎಂದು ಸಲಹೆ ನೀಡಿದರು.

ಈಗಲೂ ಸಾಕಷ್ಟು ಸಂವಹನ-ಸಂವಾದ ನಡೆಯುತ್ತಿದ್ದರೂ ನಾವು ಎಲ್ಲೋ ಒಂದು ಕಡೆ ಎಡವುತ್ತಿದ್ದೇವೆ. ವಚನಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದುದ್ದಲ್ಲ. ಇವು ಎಲ್ಲರಿಗೂ ತಲುಪಬೇಕು ಎಂದರು.

ಕಲ್ಯಾಣ ರಾಜ್ಯ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಇನ್ನೂ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಮುಂದಾದರೂ ಆಗಲಿ ಎಂದು ಆಶಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಚನ ಸಾಹಿತ್ಯ ಜನಪರವಾದದ್ದು. ಜನರ ಉದ್ಧಾರಕ್ಕಾಗಿ ರಚಿತವಾದದ್ದು. ಜನರನ್ನು ಅಜ್ಞಾನದ ಕಡೆಯಿಂದ ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವಂಥದ್ದು ಎಂದು ಹೇಳಿದರು.

ಬಸವಣ್ಣವರು ಲಿಂಗ, ವರ್ಣ, ಜಾತಿ ತಾರತಮ್ಯ ನಿವಾರಣೆಗಾಗಿ, ಅಂಧ, ಮೌಢ್ಯದ ವಿರುದ್ಧ ಜಾಗೃತಿಗಾಗಿ ಹೋರಾಡಿದವರು. ಸಮ ಸಮಾಜ ನಿರ್ಮಾಣ ಅವರ ಆಶಯವಾಗಿತ್ತು. ಹನ್ನೆರಡನೇ ಶತಮಾನದಲ್ಲಿನ ಅನುಭವ ಮಂಟಪ ಇಂದಿನ ಸಂಸತ್ತಿಗೆ ಮಾದರಿ ಎಂದರು.

ರಶ್ಮಿ ಕೋಟಿ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ, ವಚನಗಳು ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗುತ್ತವೆ ಎಂದರು.

ದತ್ತಿ ದಾನಿ, ವಿವಿ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಆರ್.ಎನ್.ದಿನೇಶ್ ಮಾತನಾಡಿ, ವಚನಗಳ ಆಶಯಗಳ ಪಾಲನೆಯಾಗಬೇಕು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿ, ಪ್ರಸ್ತುತ ರಾಜಕಾರಣ ಹಾದಿ ತಪ್ಪಿದೆ. ಒಬ್ಬರು ಮತ್ತೊಬ್ಬರನ್ನು ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಮಾಧ್ಯಮಗಳೂ ಅದನ್ನೇ ವೈಭವೀಕರಿಸುತ್ತಿವೆ ಎಂದು ವಿಷಾದಿಸಿದರು. ವಚನ ಸಾಹಿತ್ಯ-ಸಂವಹನ ಕುರಿತು ಸಂವಾದ, ಪ್ರಶ್ನೋತರ ಕೂಡ ನಡೆಯಿತು.

ಚಾಮುಂಡೇಶ್ವರಿ ಅಕ್ಕನ ಬಳಗದವರು ವಚನ ಗಾಯನ ನಡೆಸಿಕೊಟ್ಟರು. ಡಾ.ಆರ್.ಎನ್. ದಿನೇಶ್, ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ. ರಾಘವೇಂದ್ರ, ಜಯಾಗೌಡ, ಗೀತಾ, ಪ್ರೊ.ಡಿ.ಎಸ್. ಸದಾಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net