

ಶಿರಾಳಕೊಪ್ಪ: ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳು ನಿರಂತರ ನಡೆಯಬೇಕು ಹಾಗೂ ಜನಮಾನಸದಲ್ಲಿ ಮತ್ತೆ ಮತ್ತೆ ನೆನಪು ಮಾಡಿಕೊಡುವ ನಿಟ್ಟಿನಿಲ್ಲಿ ದತ್ತಿ ಕಾರ್ಯಕ್ರಮಗಳು ಸಹಕಾರಿ ಆಗುತ್ತಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಪಟ್ಟಣದಲ್ಲಿ ಡಾ. ಕಾರ್ತಿಕ್ ಮತ್ತು ಚೈತ್ರಾ ಪ್ರದೀಪ್ ತಮ್ಮ ಪಾಲಕರಾದ ಕೆ.ನಿವೇದಿತಾ, ಕೆ.ರಾಜು ಹೆಸರಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ದತ್ತಿ ದಾನಿಗಳಿದ್ದಾರೆ. ಶಿರಾಳಕೊಪ್ಪದಂತಹ ಹೋಬಳಿ ಮಟ್ಟದಲ್ಲಿ ಅತಿ ಹೆಚ್ಚು ದತ್ತಿ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಕನ್ನಡ ಉಪನ್ಯಾಸಕ ಪಿ.ನಾಗರಾಜ್ ಮಾತನಾಡಿ, ವಚನ ಎಂದರೆ ಮಾತು. ಮಾತು ಎಂದರೆ ಸತ್ಯ. ಸತ್ಯ ಎಂದರೆ ಶಿವ. ವಚನಕಾರರು ಲೋಕಕ್ಕೆ ಸಂದೇಶವನ್ನು ಕೊಡುವದರ ಜತೆಗೆ ಪ್ರಯೋಗಶೀಲರಾಗಿದ್ದರು ಎಂದು ಹೇಳಿದರು.
ಕೆಎಸ್‌ಡಿಎಲ್ ಮಾಜಿ ನಿರ್ದೇಶಕಿ ನಿವೇದಿತಾ ರಾಜು ಅವರು ವಚನಗಳ ಉಳಿವಿಗೆ ಫ.ಗು.ಹಳಕಟ್ಟಿ ಅವರ ಕೊಡುಗೆಗಳ ಕುರಿತು ಮಾತನಾಡಿದರು. ಶಿರಾಳಕೊಪ್ಪ ಕಸಾಪ ಘಟಕದ ಅಧ್ಯಕ್ಷ ಮಂಜುನಾಥ, ಶಿಕಾರಿಪುರ ತಾಲೂಕು ಕಸಾಪ ಅಧ್ಯಕ್ಷ ರಘು, ಪುರಸಭೆ ಸದಸ್ಯೆ ರಾಜೇಶ್ವರಿ ವಸಂತಕುಮಾರ ಇತರರಿದ್ದರು.