ಸಾಹಿತ್ಯಕ್ಕೆ ಹೊಸಬೆಳಕು ನೀಡಿದ ವಚನ ಸಾಹಿತ್ಯ

Birth Anniversary of Vachana Pitamaha Dr. p.g. Halakatti
Published on

ಮೈಸೂರು: ಸಾಹಿತ್ಯಕ್ಕೆ ಹೊಸಬೆಳಕು ತಂದುಕೊಟ್ಟಿದ್ದು ವಚನ ಸಾಹಿತ್ಯ ಎಂದು ಶಾಸ್ತ್ರೀಯ ಭಾಷಾ ಕನ್ನಡ ಅತ್ಯುನ್ನತ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ್ ಹೇಳಿದರು.

ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನ ಸಾಹಿತ್ಯವನ್ನು ಸಂರಕ್ಷಿಸಿ, ನಮಗೆ ಉಳಿಸಿಕೊಟ್ಟ ಕೀರ್ತಿ ಡಾ.ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಕಲ್ಯಾಣಕ್ರಾಂತಿಯ ನಂತರ ಓಲೆಗರಿಯಲ್ಲಿದ್ದ ಸಾಹಿತ್ಯವನ್ನು ಯಾವಾಗಲೋ ತೆಗೆದು ಪೂಜೆ ಮಾಡಿ, ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದರು. ಇದನ್ನು ಗಮಸಿದ ಹಳಕಟ್ಟಿ ಅವರು ವಚನಗಳ ಓಲೆಗರಿಗಳ ಸಂಗ್ರಹಕ್ಕೆ ಇಳಿದರು. ವಚನ ಸಾಹಿತ್ಯ ಸಂಗ್ರಹಕ್ಕೆ ಅವರು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ಸರಳವಾಗಿ ಬದುಕಿ, ಘನವಾದ ಸಾಧನೆ ಮಾಡಿದರು ಎಂದರು.

ವಿದ್ಯಾರ್ಥಿಗಳು ಕೂಡ ಹಳಕಟ್ಟಿ ಅವರಂತೆ ಸರಳತೆ ಮೆಗೂಡಿಸಿಕೊಳ್ಳಬೇಕು. ಸಾಹಿತ್ಯ, ಸಂಸ್ಕೃತಿ ಅಧ್ಯಯನ ಮಾಡಬೇಕು,. ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ವಚನ ಸಾಹಿತ್ಯ, ಕುವೆಂಪು ಸಾಹಿತ್ಯ ಓದುವುದು ಎಂದರೆ ಅಮೃತ ಘಳಿಗೆ. ಆದ್ದರಿಂದ ಮಹಾಪುರುಷರ ಬದುಕಿನ ಕಥನ ಓದಿ. ಆ ಮೂಲಕ ಬದುಕನ್ನು ಉತ್ತಮಪಡಿಸಿಕೊಳ್ಳಿ ಎಂದು ಅವರು ಸಲಹೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಡಾ.ಫ.ಗು. ಹಳಕಟ್ಟಿ ಅವರು ಮನೆಯನ್ನು ಮಾರಾಟ ಮಾಡಿ, ಮುದ್ರಣಾಲಯ ಸ್ಥಾಪಿಸಿ, ವಚನ ಸಾಹಿತ್ಯ ಮುದ್ರಿಸಿ ಪ್ರಚುರಪಡಿಸಿದರು ಎಂದು ಸ್ಮರಿಸಿದರು.

ದತ್ತಿ ದಾಸೋಹಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಕಲ್ಯಾಣಕ್ರಾಂತಿಯ ನಂತರ ಚದುರಿ ಹೋಗಿದ್ದ ವಚನಗಳನ್ನು ಹಳಕಟ್ಟಿ ಅವರು ಸಂಗ್ರಹಿಸಿದ್ದರಿಂದ ಈಗ 24 ಸಾವಿರ ವಚನಗಳು ಲಭ್ಯವಿವೆ ಎಂದರು.

ಯುವಜನತೆ ಆರ್‌ಸಿಬಿ ವಿಜಯೋತ್ಸವ, ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂತಹ ಕಡೆ ಗಮನ ನೀಡುವ ಬದಲು ನಮ್ಮ ದೇಹವೇ ದೇಗುಲ ಎಂದು ಭಾವಿಸಬೇಕು. ನಮ್ಮ ವಚನ ಸಾಹಿತ್ಯ, ಸಂಸ್ಕೃತಿಯನ್ನು ಅರಿಯಬೇಕು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ದೇವರಾಜ ಪಿ. ಚಿಕ್ಕಹಳ್ಳಿ ಮಾತನಾಡಿ, ಫ.ಗು. ಹಳಕಟ್ಟಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸ್ವೀಕರಿಸಲು ಹರಿದ ಅಂಗಿ ಮೇಲೆ ಕೋಟು ಹಾಕಿಕೊಂಡು ಹೋಗಿದ್ದರು. ಈ ರೀತಿಯ ಸರಳತೆ ಮೈಗೂಡಿಸಿಕೊಳ್ಳಿ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳಹರಹುಂಡಿ ಸಿದ್ದಪ್ಪ ಮಾತನಾಡಿ, ವಚನ ಸಾಹಿತ್ಯ ಕರ್ನಾಟಕದ ಸಂಪತ್ತು. ಶರಣರ ಕ್ಷೇತ್ರಗಳನ್ನು ರಕ್ಷಿಸಬೇಕು, ಶರಣ ಸಾಧಕರ ಬಗ್ಗೆ ಅಧ್ಯಯನಗಳಾಗಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಪ್ರಾಂಶುಪಾಲೆ ಡಾ.ಸೌಮ್ಯಾ ಈರಪ್ಪ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ. ಲಾವಣ್ಯ, ಸಹಾಯಕ ಪ್ರಾಧ್ಯಾಪಕಿ ಬಿ.ಕೆ. ರಶ್ಮಿ, ಸಹಾಯಕ ಪ್ರಾಧ್ಯಾಪಕ ಕೆ.ಎಂ. ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net