

ಬಳ್ಳಾರಿ : ಸಮಾಜದಲ್ಲಿ ಕೋಮು ಸೌಹಾರ್ದತೆಯ ಕ್ರಾಂತಿಯ ಕಿಡಿಹಚ್ಚಿದ 12ನೇ ಶತಮಾನದ ಶಿವಶರಣರು ಹುಟ್ಟು ಹಾಕಿರುವ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ ಎಂದು ಸಮಾಜ ಸೇವಕ ವೆಂಕಟೇಶ್ ಪ್ರಸಾದ್ ಅವರು ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣ ಅವರ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ವಚನ ಸಾಹಿತ್ಯ ಸುವರ್ಣ ಯುಗ ಕಂಡಿತ್ತು. ಅಂದಿನಿಂದ ಇಂದಿನವರೆಗೂ ವಚನಸಾಹಿತ್ಯದ ದೀವಿಗೆ ಮನುಷ್ಯರ ಬಾಳಿನಲ್ಲಿ ಬೆಳಗುತ್ತಿದೆ ಎಂದರು.
ಶಿವಶರಣರು ನುಡಿದಂತೆ ನಡೆದವರು. ಅವರು ನುಡಿದದ್ದೇ ವಚನವಾಯಿತು. ವಚನವೇ ನುಡಿ ಆಯಿತು. ಜಗತ್ತಿಗೆ ಕಾಯಕದ ಮಹತ್ವ ಸಾರಿದ ಶರಣರು ಕಾಯಕವೇ ಕೈಲಾಸ ಎನ್ನುವ ವಚನವಾಕ್ಯ ವೇದದ ಸಮಾನವಾಗಿದೆ. ಬಸವಣ್ಣವ ಅವರ ವಿಚಾರಗಳನ್ನು ಅಳವಡಿಸಿಕೊಂಡರೆ ಎಲ್ಲರ ಬದುಕು ಸಾರ್ಥಕವಾಗುತ್ತದೆ ಎಂದರು.
ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ, ಇತಿಹಾಸ ಸಂಶೋಧಕ ಟಿ.ಎಚ್.ಎಂ ಬಸವರಾಜ್ ಮಾತನಾಡಿ, ಬಸವಣ್ಣ ಅವರ ವಚನಗಳನ್ನು ನಮ್ಮ ಕುಟುಂಬದ ಹಿರಿಯರು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡುವ ಮೂಲಕ ಜಗತ್ತಿನ ಜನರಿಗೆ ವಚನ ಸಾಹಿತ್ಯದ ಅಮೂಲ್ಯ ವಿಚಾರಗಳು ತಿಳಿದುಕೊಳ್ಳಲು ಸಹಕಾರವಾಗಿದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ್ ಅವರು ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ದತ್ತಿ ದಾನಿ ಟಿ.ಎಚ್.ಎಂ ಚನ್ನವೀರಸ್ವಾಮಿ, ಸಮಾಜ ಸೇವಕ ಸುರೇಶ್ ಕುಮಾರ್, ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಕೆ.ವಿ.ರವಿಶಂಕರ್, ಮೃತ್ಯುಂಜಯ ಹಿರೇಮಠ, ಡಾ.ಸುಶೀಲಾ ಹಿರೇಮಠ, ಅರುಣ ಸ್ವಾಮಿ, ಡಾ.ವಿಜಯ ದಂಡಾವತಿಮಠ, ಟಿ.ಎಚ್.ಎಂ ಮೃತ್ಯುಂಜಯ, ಟಿ.ಎಚ್.ಎಂ ರಾಜಕುಮಾರ್, ವಿಜಯಕುಮಾರ್ ಇನ್ನಿತರರು ಇದ್ದರು.