ಕಾಯಕದಲ್ಲಿ ದೇವರ ಕಂಡ ವಚನಕಾರರು : ವಿದ್ಯಾಶ್ರೀ ಹರಕೂಡೆ

Vachana jyoti balaga
Published on

ಬೆಂಗಳೂರು: ‘ಕಾಯಕವೇ ಕೈಲಾಸ’ ಎಂದು ಮನದಟ್ಟು ಮಾಡಿಕೊಂಡು ಕಾಯಕದಲ್ಲಿಯೇ ದೇವರ ಕಂಡುಕೊಂಡವರು ವಚನಕಾರರು ಎಂದು ಕವಯತ್ರಿ ವಿದ್ಯಾಶ್ರೀ ಹರಕೂಡೆ ಹೇಳಿದರು.

ವಚನಜ್ಯೋತಿ ಬಳಗ ಆಯೋಜಿಸಿದ್ದ ಕುರುಬ ಗೊಲ್ಲಾಳ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮುಗ್ಧತೆಯ ಪ್ರತಿರೂಪವಾಗಿದ್ದ ಗೊಲ್ಲಾಳ ಕಲ್ಯಾಣದಲ್ಲಿ ಬಸವಣ್ಣನವರ ಜೊತೆಗೂಡಿ ಹಂಚಿಕೊಂಡಿರುವ ಅನುಭಾವಗಳಲ್ಲಿ ತಮ್ಮ ಕುರಿ ಕಾಯುವ ಕಾಯಕವನ್ನೇ ವಸ್ತುವಾಗಿರಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಬೆಂಗಳೂರಿನಲ್ಲಿ ಕುರುಬ ಗೊಲ್ಲಾಳರ ಪರಿಚಯವಿಲ್ಲ, ಹಾಗಾಗಿ ಬಳಗವು ನೆಲದ ಮರೆಯ ವಚನಕಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಗೊಲ್ಲಾಳರ ಜೀವನ ಚಿತ್ರದೊಂದಿಗೆ ಅವರ ಅನುಭಾವದ ವಚನಗಳ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದ ಅವರು, ಜೂನ್ ತಿಂಗಳ ಕೊನೆಯಿಂದ 18 ದಿನ (ಪ್ರತಿ ಶನಿವಾರ ಮತ್ತು ಭಾನುವಾರ) ಮಕ್ಕಳ ವಚನ ಮೇಳ ನಡೆಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜನಪದ ಗಾಯಕ ಬಸವರಾಜ ಅಜ್ಜಪ್ಪರನ್ನು ಸನ್ಮಾನಿಸಲಾಯಿತು.ವಚನ ಕಲಿಕಾ ತರಗತಿಯ ವಿದ್ಯಾರ್ಥಿಗಳು ಮತ್ತು ಮುಕ್ತಾಯಕ್ಕ ಬಳಗದವರು ವಚನ ಗಾಯನ ನಡೆಸಿಕೊಟ್ಟರು.

ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಹೊನ್ನಲಿಂಗಯ್ಯ, ಗಾಯಕ ದೇವೇಂದ್ರಕುಮಾರ ಪತ್ತಾರ್, ಪೂರ್ಣಚಂದ್ರ ಫೌಂಡೇಷನ್‌ನ ಚನ್ನಕೇಶವಮೂರ್ತಿ, ಗಾಯಕಿಯರಾದ ಮೀನಾಕ್ಷಿ ಮೇಟಿ, ಜಾನಕಿ, ಬಳಗದ ರಾಜಾ ಗುರುಪ್ರಸಾದ್, ಪ್ರಭು, ಸಂಗಮೇಶ್, ಅನೀಲ್, ವಿಜಯನಗರ ಕಾಂಗ್ರೆಸ್ ಮುಖಂಡ ನಂಜಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net