

ಭಾಲ್ಕಿ: ಅಕ್ಕನ ವಚನಗಳ ಅಧ್ಯಯನ ಮಾಡಿದರೆ ಬದುಕಿನ ನೈಜತೆ ತಿಳಿದುಕೊಳ್ಳಲು ಸಾಧ್ಯ ಎಂದು ಕೌಠಾ(ಬಿ) ಬಸವಯೋಗಾಶ್ರಮದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹಿರೇಮಠ ಸಂಸ್ಥಾನದಿಂದ ವಚನ ಜಾತ್ರೆ-೨೦೨೪, ಅಕ್ಕಮಹಾದೇವಿ ಜಯಂತಿ ಮತ್ತು ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ೨೫ನೆಯ ಸ್ಮರಣೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಅಕ್ಕನ ಯೋಗಾಂಗ ತ್ರಿವಿಧಿ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ನೀಲಾಂಬಿಕಾ ತಾಯಿ ಗರಡಿಯಲ್ಲಿ ಬೆಳೆದ ಅಕ್ಕಮಹಾದೇವಿ ಸ್ವರ, ಸೃಷ್ಟಿ, ಯೋಗಾಂಗ ತ್ರಿವಿಧಿ ವಚನಗಳ ಮೂಲಕ ಅದ್ಭುತ ಸಂದೇಶ ಸಾರಿದ್ದಾರೆ ಎಂದರು.
ವ್ಯಕ್ತಿಯ ಯೋಗ ಸಾಧನೆಗೆ ಅಕ್ಕನ ವಚನಗಳು ಪೂರಕವಾಗಿವೆ. ವಿಶೇಷವಾಗಿ ಯೋಗಾಂಗ ತ್ರಿವಿಧಿ ವಚನಗಳಲ್ಲಿ ಉತ್ತಮ ಸಂದೇಶ ಅಡಗಿವೆ. ಹೀಗಾಗಿ ಪ್ರತಿಯೊಬ್ಬರೂ ಅಕ್ಕನ ವಚನಗಳ ಅಧ್ಯಯನ ಜತೆಗೆ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪದೇಶಿಸಿದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ, ಅತ್ತಿವೇರಿಯ ಪೂಜ್ಯ ಬಸವೇಶ್ವರಿ ತಾಯಿ ಸಮ್ಮುಖ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ಕಸಾಪ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಡದಾಳೆ, ತಾಲೂಕು ಜಾಗತಿಕ ಲಿಂಗಾಯತ ಸಮಾಜದ ಅಧ್ಯಕ್ಷ ಬಸವರಾಜ ಮರೆ, ಪ್ರಮುಖರಾದ ಶಿವರಾಜ ಮಲ್ಲೇಶಿ, ಧನರಾಜ ರಾಗಾ, ಬಾಬುರಾವ ಸೋನಕಾಂಬಳೆ, ಅಶೋಕ ಅಂಬಿಗಾರ, ಸುಧಾಕರ ಸೂರ್ಯವಂಶಿ, ಪುಟ್ಟರಾಜ ನೇಳಗೆ ಇತರರಿದ್ದರು.
ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಪ್ರಗತಿ ಸ್ವಾಮಿ, ಸಂಗಯ್ಯ ಸ್ವಾಮಿ ಡೊಂಗರಗಿ, ಲೋಕನಾಥ ಚಾಂಗಲೇರಾ ವಚನ ಸಂಗೀತ ನಡೆಸಿಕೊಟ್ಟರು. ಕು. ಶ್ರೀಗೌರಿ ಶ್ರೀಕಾಂತ ಸ್ವಾಮಿ ನಿರೂಪಣೆ ಮಾಡಿದರು.
ಹಲವರಿಗೆ ಸನ್ಮಾನ: ಹಜನಾಳ ಗ್ರಾಮದ ರಾಜಕುಮಾರ ಪಾಟೀಲ್ ಆನಂದವಾಡೆ ಮತ್ತು ನಿವೃತ್ತ ಉಪನ್ಯಾಸಕಿ ವಿಜಯಲಕ್ಷ್ಮೀ ಗಡ್ಡೆ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು.
ಇಂದು ಬಸವದರ್ಶನ ಗೋಷ್ಠಿ: ಭಾನುವಾರ ಸಂಜೆ ೬ಕ್ಕೆ ಅಕ್ಕನ ವಚನಗಳಲ್ಲಿ ಬಸವದರ್ಶನ ಗೋಷ್ಠಿ ಜರುಗಲಿದೆ. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಶಂಕರಲಿಂಗ ಸ್ವಾಮೀಜಿ ಸಮ್ಮುಖ ಮತ್ತು ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅಧ್ಯಕ್ಷತೆ ವಹಿಸುವರು. ಕಲಬುರಗಿಯ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್ ಅನುಭಾವ ನೀಡುವರು. ಸಾಹಿತಿ ವಿಜಯಲಕ್ಷ್ಮೀ ಕೌಟಗೆ ಬಸವ ಗುರುವಿನ ಪೂಜೆ ನೆರವೇರಿಸುವರು. ನಿವೃತ್ತ ಮುಖ್ಯಾಧಿಕಾರಿ ಬಸಪ್ಪ ಬಂಬುಳಗೆ, ನಿವೃತ್ತ ಶಿಕ್ಷಕ ನೀಲಕಂಠಯ್ಯ ಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ. ವೈದ್ಯಾಧಿಕಾರಿ ಡಾ.ಜಗದೀಶ ಖಂಡಾಳೆ, ಹಿರಿಯ ಪತ್ರಕರ್ತ ಚಂದ್ರಕಾಂತ ಪಾಟೀಲ್, ಪ್ರಮುಖರಾದ ರವಿ ಮೀಸೆ, ಶಿವಶರಣಪ್ಪ ವಲ್ಲೇಪುರೆ, ರಾಜಕುಮಾರ ಹೂಗಾರ, ಜೈಪ್ರಕಾಶ ಕುಂಬಾರ, ಡಾ.ದಿಲೀಪ ಸಿಂಧೆ, ಆಕಾಶ ರಿಕ್ಕೆ ಭಾಗವಹಿಸುವರು.
ಮನುಷ್ಯನ ಎಲ್ಲ ಸಮಸ್ಯೆಗಳಿಗೆ ಬಸವತತ್ವದಲ್ಲಿ ಪರಿಹಾರ ಅಡಗಿದೆ. ಆದರೆ ನಮ್ಮಲ್ಲಿ ಬಸವತತ್ವ ಪ್ರಚಾರ ಪ್ರಸಾರ ಮಾಡುವವರ ಕೊರತೆ ಇದ್ದು, ನೀಗಿಸುವ ಹೊಣೆಗಾರಿಕೆ ನಮ್ಮಂಥ ಮಠಾಧೀಶರ ಮೇಲಿದೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ