ಮನಸ್ಸು ಅರಳಿಸಲು ವಚನ ಜಾತ್ರಾ ಮಹೋತ್ಸವ

Vachana Jatra Festival to open the mind
Vachana Jatra Festival to open the mind
Published on

ಜಮಖಂಡಿ: ಇಂದಿನ ಕಲುಷಿತ ವಾತಾವರಣದಲ್ಲಿ ಕೆರಳಿರುವ ಯುವಕರ ಮನಸ್ಸನ್ನು ಅರಳಿಸುವ ಉದ್ದೇಶದಿಂದ ಓಲೇಮಠದ ಆಶ್ರಯದಲ್ಲಿ ವಚನ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಓಲೇಮಠದ ಆನಂದ ದೇವರು ಹೇಳಿದರು.

ನಗರದ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಏ.29ರ ವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಎರಡನೆಯ ದಿನವಾದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಾಹ್ಯ ತೋರಿಕೆಯ ವಿಚಾರಗಳಿಗಿಂತ ಅಂತರಂಗದಲ್ಲಿ ಒಳ್ಳೆಯ ವಿಚಾರಗಳಿದ್ದರೆ ಒಳ್ಳೆಯವರು ಎನಿಸಿಕೊಳ್ಳುತ್ತಾರೆ. ತಲೆಯಲ್ಲಿ ಒಳ್ಳೆಯ ವಿಚಾರಗಳನ್ನಿಟ್ಟುಕೊಂಡು ಒಳ್ಳೆಯವರಾಗಿ ಯುವಕರು ರೂಪುಗೊಳ್ಳಬೇಕು ಎಂದರು.

ಝುಂಜರವಾಡದ ಬಸವರಾಜೇಂದ್ರ ಶರಣರು ಶರಣೆ ಸತ್ಯಕ್ಕನ ವಚನ ಕುರಿತು ಪ್ರವಚನ ನೀಡಿ, ಅರ್ಚನೆ, ಮಂತ್ರ, ತಂತ್ರ, ಧೂಪ, ದೀಪ ನೇಮವಲ್ಲ. ಬಾಹ್ಯ ದೀಪಕ್ಕಿಂತ ಅಂತರಂಗದ ಅರಿವಿನ ದೀಪ ಹಚ್ಚಬೇಕು. ಪ್ರೇಮದ ದೀಪ ಹಚ್ಚಬೇಕು. ಬಿರುಗಾಳಿಯಲ್ಲೂ ಆರದಂತ ಅರಿವಿನ ದೀಪ ಹಚ್ಚಬೇಕು ಎಂದರು.

ನಿವೃತ್ತ ಡಿವೈಎಸ್‌ಪಿ ಪಿ.ಎನ್. ಪಾಟೀಲ ಮಾತನಾಡಿ, ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವದ ಸಂಸತ್ ಪರಿಕಲ್ಪನೆ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಓಲೇಮಠ ಕೂಡ ಅನುಭವ ಮಂಟಪವಾಗಲಿ ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ, ಉದ್ಯಮಿ ರಾಜೇಶ್ವರಿ ಹಿರೇಮಠ, ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ. ಶೆಟ್ಟರ ಮಾತನಾಡಿದರು.

ಮಹಾಪ್ರಸಾದದ ದಾಸೋಹಿ ಅಪ್ಪಾಸಾಬ ಚೌಗಲಾ, ನಗರಸಭೆ ಸದಸ್ಯೆ ಪೂಜಾ ವಾಳ್ವೇಕರ, ಗುತ್ತಿಗೆದಾರ ಮಹಾದೇವ ಕಂಕಾಳೆ, ರಶ್ಮಿ ದೇಸಾಯಿ, ಮೇಘಾ ಮಹಾಬಳಶೆಟ್ಟಿ ಇದ್ದರು.

ಶಿರಸಂಗಿಯ ಸಂಗಮೇಶ್ವರ ದೇವರು, ಹೂವಿನ ಹಿಪ್ಪರಗಿಯ ವಿಶ್ವನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ಗದುಗಿನ ಗವಾಯಿ ರವಿಕುಮಾರ ಬೆಣ್ಣಿ, ತಬಲಾ ವಾದಕ ಹನಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ರಕ್ಷಿತಾ ಕರಡಿ ವಚನ ಪ್ರಾರ್ಥನೆ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net