

ಮೈಸೂರು; ಆಧ್ಯಾತ್ಮಿಕ ಸಾಕ್ಷಾತ್ಕಾರಗಳಿಂದ ಕೂಡಿದ ಭಾವಗೀತೆಗಳ ಸಾರವೇ ವಚನ ಸಾಹಿತ್ಯ ಎಂದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಿ.ಉದಯಕುಮಾರ್ ಹೇಳಿದರು.
ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಲಕ್ಷ್ಮೀಪುರಂನ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಶರಣ ದರ್ಶನ’ ಕುರಿತು ಆಶುಭಾಷಣ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವನ ಪಂಚೇಂದ್ರಿಯಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ವಚನಗಳ ಓದು ಅಗತ್ಯ ಇದೆ. ಕೋಪ ಮತ್ತು ತಪ್ಪನ್ನು ನಿಯಂತ್ರಿಸುವ ಶಕ್ತಿ ವಚನಕ್ಕಿದೆ. ಹಣದ ಬೆನ್ನು ಹತ್ತಿದ ವ್ಯಕ್ತಿ ಕಳೆದುಹೋಗುತ್ತಾನೆ. ಆಲಿಸುವಿಕೆ ಬದುಕಿನ ಪ್ರಗತಿಯ ಒಂದು ಭಾಗ. ಆಲಿಸದವನು ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.
ಮುಖ್ಯೋಪಾಧ್ಯಾಯ ಎಂ.ಸಿ.ದೇವರಾಜು ಮಾತನಾಡಿ, ಆಳವಾದ ಅಧ್ಯಯನದಿಂದ ಧೈರ್ಯದಿಂದ ಮಾತನಾಡುವ ಕಲೆ ಬೆಳೆಯುತ್ತದೆ. ಈ ಕಾರಣಕ್ಕಾಗಿಯೇ ಜೀವನ ಮೌಲ್ಯದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪರಿಷತ್‌ನ ನಗರಾಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿ, ಎಲ್ಲ ಧರ್ಮಗಳ ಸಾತ್ವಿಕ ಸಾರವು ವಚನ ಸಾಹಿತ್ಯದಲ್ಲಿ ಇದೆ ಎಂದರು.
ದತ್ತಿ ದಾನಿಗಳಾದ ಬಿ.ಎಸ್.ನಾಗಭೂಷಣ್, ಸೌಮ್ಯಾ, ಡಾ.ಮುದ್ದುಮಲ್ಲೇಶ್, ಪರಿಷತ್‌ನ ಕಾರ್ಯದರ್ಶಿ ಕುಮಾರಸ್ವಾಮಿ, ನಂದೀಶ್ ಲೋಕೇಶಪ್ಪ ಇತರರು ಇದ್ದರು.