ಶರಣರಿಂದ ಶಾಂತಿಯ ತೋಟ ನಿರ್ಮಾಣ: ಡಾ.ಸಿ.ಪಿ.ಲಾವಣ್ಯಾ

21
Published on

ಮೈಸೂರು: 12ನೇ ಶತಮಾನದವರಿಗೂ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ವಲಯಗಳಲ್ಲಿ ಗೊಂದಲ ತುಂಬಿತ್ತು. ಆಗ ಬಂದ ಶರಣರು ಗೊಂದಲಗಳಿಗೆ ಅಂತ್ಯ ಹಾಡಿ ಧಾರ್ಮಿಕ ನೆಲೆಗಟ್ಟಿನ ಮೇಲೆ ಸಮಾಜದಲ್ಲಿ ಶಾಂತಿಯ ತೋಟವನ್ನು ನಿರ್ಮಿಸಿದರು ಎಂದು ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕಿ ಡಾ.ಸಿ.ಪಿ.ಲಾವಣ್ಯಾ ಹೇಳಿದರು.

ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ವತಿಯಿಂದ ವಿಜಯನಗರ 2ನೇ ಹಂತದ ಜೆಎಸ್‌ಎಸ್ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ವಚನ ಗಾಯನ-ವಾಚನ-ವ್ಯಾಖ್ಯಾನ’ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರು ಮಾನವ ಕಲ್ಯಾಣ ಬಯಸಿದ್ದರು. ಅವರಲ್ಲಿ ಬದುಕಿನ ಸರಿ ತಪ್ಪುಗಳನ್ನು ತಿದ್ದುವ ನಡೆ ನುಡಿ ಒಂದಾಗಿತ್ತು. ಜಾತಿಯ ಅಸಮಾನತೆ, ಗಂಡು ಹೆಣ್ಣುಗಳ ಅಸಮಾನತೆ ವಿರೋಧಿಸಿ ಎಲ್ಲವನ್ನು ಸಮನಾಗಿ ಕಂಡವರು ಶರಣರು ಎಂದರು.

ನೆರೆಹೊರೆಯೇ ಹೊರೆ ಎಂದು ಭಾವಿಸುವ ಈ ದಿನಮಾನದಲ್ಲಿ ಕಾಗೆಯೊಂದು ಅಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವೆಲ್ಲವ ಎಂಬ ಮಾತಿನಂತೆ ಹಂಚು ತಿನ್ನುವ ಬದುಕನ್ನು ಪ್ರತಿಪಾದಿಸಿದರು. ಹಸಿದವರಿಗೆ ಅನ್ನವನಿಕ್ಕಿ ಮಾನವೀಯತೆ ಮೆರೆಯುವುದೇ ನಿಜವಾದ ಭಕ್ತಿ ಮತ್ತು ಶಿವ ಪ್ರೀತಿ ಎಂದು ಹೇಳಿದರು.

ಮಕ್ಕಳೇ ಶರಣರ ವಚನಗಳನ್ನು ಓದಿ ಅನುಸರಿಸುವುದರ ಮೂಲಕ ನಮ್ಮ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳಬಹುದು ಎಂದು ತಿಳಿಸಿದರು.ಪ್ರಾಂಶುಪಾಲ ಎ.ಆರ್.ಕಾಂತರಾಜು ಬಹುಮಾನ ವಿತರಿಸಿದರು. ಅಮೃತಾ, ಯೋಗಿತಾ, ಯಶಸ್ವಿನಿ, ಐಶ್ವರ್ಯಾ ಬಹುಮಾನ ಪಡೆದುಕೊಂಡರು. 20ಕ್ಕೂ ಹೆಚ್ಚು ಮಕ್ಕಳು ಶರಣರ ವೇಷಧರಿಸಿ ಅತ್ಯಂತ ಹರ್ಷ ತಂದರು. ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ದತ್ತಿ ದಾನಿಗಳಾದ ರಾಜೇಂದ್ರ ಸ್ವಾಮಿ ದಂಪತಿ, ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net