

ಸುಂಟಿಕೊಪ್ಪ:
ಹನ್ನೆರಡನೇ ಶತಮಾನದಲ್ಲಿ ಜನರು ಅನುಭವಿಸುತ್ತಿದ್ದ ಸಾಮಾಜಿಕ ಅಸಮಾನತೆಗಳನ್ನು ನೀಗಿಸಲು ಎಲ್ಲಾ ಜಾತಿ ವರ್ಗಗಳ ವಚನಕಾರರು ವಚನಗಳನ್ನು ರಚಿಸಿ ಜನರಲ್ಲಿ ಸಾಮಾಜಿಕ ಪ್ರಜ್ಞೆಯ ಜತೆಗೆ ಅವರ ಜೀವನ ಸುಧಾರಣೆಗೆ ರೂಪಿಸಿದ ಜನರಾಡುವ ಸರಳ ಭಾಷೆಯ ವಚನಗಳು ಸದ್ಗುಣಗಳನ್ನು ಭಿತ್ತಿ ಬೆಳೆವ ಭೂಮಿಕೆ ಎಂದು ಕುಶಾಲನಗರ ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಕೋಟ್ಯಾನ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಗರಗಂದೂರು ಮುರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳೆಡೆಗೆ ವಚನ ಸಾಹಿತ್ಯದ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಸರ್ವ ಶ್ರೇಷ್ಠ ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಬೇಕಾದುದು ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದುದು ಇಂದಿನ ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಚನ ಸಾಹಿತ್ಯ, ದಾಸ ಸಾಹಿತ್ಯ, ಕೀರ್ತನೆ ಮೊದಲಾದ ಭಾರತೀಯ ಸಂಸ್ಕೃತಿ ಪರ್ವಗಳನ್ನು ಅರಿತು ಸಮಾಜಕ್ಕೆ ಉಣಬಡಿಸುವ ಮೂಲಕ ಸುಗಮ ಸಮಾಜ ಕಟ್ಟಬೇಕಿದೆ. ನಾಲ್ಕು ದಿನಗಳ ಮಾನವ ಬದುಕನ್ನು ಸುಂದರವಾಗಿ ಕಳೆಯಬೇಕಿದ್ದಲ್ಲಿ ಪರಸ್ಪರ ವೈರತ್ವ, ಅಸೂಯೆ, ಕೋಪ ತಾಪಗಳನ್ನು ಬಿಟ್ಟು ಎಲ್ಲರೊಂದಿಗೂ ಎಲ್ಲರ ಜೀವನ ಸ್ನೇಹ ಹಾಗೂ ವಿಶ್ವಾಸಗಳಿಂದ ಕೂಡಿರಬೇಕು ಎಂದರು.
ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದ ಹೆಬ್ವಾಲೆ ಪ್ರೌಢಶಾಲೆ ಉಪನ್ಯಾಸಕ ಮೆ.ನಾ. ವೆಂಕಟನಾಯಕ್, ೮೦೦ ವರ್ಷಗಳ ಹಿಂದೆ ವಚನಕಾರರು ತಮ್ಮ ಆಧ್ಯಾತ್ಮದ ನೆಲೆಯೊಳಗೆ ಬದುಕಿನ ಸಾರ ಹಾಗೂ ಸತ್ವಗಳನ್ನು ಸಾರಿ ಜಟಿಲವಾದ ಮನುಷ್ಯನ ಬದುಕನ್ನು ಸರಳಗೊಳಿಸಿ ನೈಜ ಬದುಕಿನ ಗಂಧ ಲೇಪಿಸಿ ತಮ್ಮ ಅನುಭವದ ನುಡಿಗಳ ತಿಂಗಳ ಬೆಳಕನ್ನು ಜನರ ಅಂಗಳಕ್ಕೆ ತಂದವರು ಶರಣ ಶ್ರೇಷ್ಠರು. ಹನ್ನೆರಡನೇ ಶತಮಾನದ ಬಸವಯುಗದ ವಚನ ಸಾಹಿತ್ಯ ಅಂದಿನ ಜನರ ಆಚಾರ - ವಿಚಾರ, ಭಾಷೆ - ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿದ ಮೇರು ಸಾಹಿತ್ಯವಾಗಿದೆ ಎಂದರು.
ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಎನ್. ಮಹೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾದಾಪುರ ಚೆನ್ನಮ್ಮ ಕಾಲೇಜಿನ ನಿವೃತ್ತ ಉಪನ್ಯಾಸಕ ಜಿ.ಇ. ಸೋಮಶೇಖರ್, ಸುಂಟಿಕೊಪ್ಪ ಸಬ್ ಇನ್ಸ್ ಪೆಕ್ಟರ್ ಶ್ರೀಧರ್, ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿದರು.
ಉಪನ್ಯಾಸಕರಾದ ದೇವರಾಜನಾಯಕ್, ಗೀತಾಂಜಲಿ, ಮಹದೇವಸ್ವಾಮಿ, ಕೆ.ಪಿ.ಪಾಪಣ್ಣ ಇದ್ದರು.