ವಚನ ವಿವಿ ಸ್ಥಾಪನೆಗೆ ಒತ್ತಾಯ,  ಲಿಂಗಾಯತ ಒಳಪಂಗಡಗಳ ಒಕ್ಕೂಟದಿಂದ ಸಿಎಂಗೆ ಮನವಿ

IMG_20250124_170525_470.jpg
Published on

ಹುಬ್ಬಳ್ಳಿ: ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಬಸವಣ್ಣನವರ ವಚನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಶರಣಪ್ಪ ಕೊಟಗಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಬಸವಣ್ಣ ಸೇರಿ ಅಂದಿನ ಶರಣರು ಬರೆದ ವಚನಗಳನ್ನು ಸರ್ವ ಜನಾಂಗದವರು ಅರಿತುಕೊಂಡು ಅನುಸರಿಸಬೇಕು. ಈ ದಿಸೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿ ಅದರ ಅಡಿ ಎಲ್ಲ ವಚನಗಳ ಅಧ್ಯಯನ ನಡೆಯುವಂತೆ ಮಾಡಬೇಕು. ಅಗತ್ಯ ಅನುದಾನವನ್ನು ನಿರಂತರ ಒದಗಿಸಬೇಕು ಎಂದರು.

ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಬರುವ ಬಜೆಟ್ ನಲ್ಲಿ ಘೋಷಣೆ ಮಾಡಬೇಕು. ಇದರಿಂದ ವಚನ ಸಾಹಿತ್ಯದ ಸಂಶೋಧನೆ ಹಾಗೂ ರಕ್ಷಣೆಗೆ ಅನುಕೂಲವಾಗಲಿದೆ ಎಂದರು.

ವಚನಗಳಲ್ಲಿ ಪ್ರತಿಪಾದಿಸಿದ ಸಮಾನತೆಯ ತತ್ವ, ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಹಾಗೂ ಭೌತಿಕ ಸ್ವಾತಂತ್ರ್ಯದ ಅಂಶಗಳು, ವ್ಯಾಸಂಗ ಹಾಗೂ ಚರ್ಚೆಗಳ ಮೂಲಕ ಪುನರುಜ್ಜೀವನಗೊಳಿಸುವುದು, ವಚನ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು, ಕನ್ನಡ ಭಾಷೆ ಪ್ರಚಾರ ಹಾಗೂ ಕನ್ನಡಿಗರಲ್ಲಿ ಭಾಷಾಭಿಮಾನ ಹೆಚ್ಚಿಸುವುದಕ್ಕಾಗಿ ವಿಶ್ವವಿದ್ಯಾಲಯ ಅಗತ್ಯವಾಗಿದೆ ಎಂದು ತಿಳಿಸಿದರು.

ಈಗಾಗಲೇ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಸರ್ಕಾರ ಮುಂಬರುವ ಬಜೆಟ್ ನಲ್ಲಿ ಘೋಷಿಸಬೇಕು ಎಂದು ಆಗ್ರಹಿಸಿದರು.

ರಾಜಶೇಖರ ಮೆಣಸಿನಕಾಯಿ, ಡಾ. ಬಿ.ಎಸ್. ಮಾಳವಾಡ, ಪ್ರೊ. ಕೆ.ಎಸ್. ಕೌಜಲಗಿ, ಶಿವಯೋಗಿ ಟೆಂಗಿನಕಾಯಿ, ವಿ.ಜಿ. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net