

ಹುಬ್ಬಳ್ಳಿ: ಪ್ರತಿಯೊಬ್ಬರು ತಮ್ಮ ಗಳಿಕೆಯಲ್ಲಿ ಸ್ವಲ್ಪ ಹಣವನ್ನು ಅಸಹಾಯಕರ ಜೀವನಕ್ಕಾಗಿ ಕೊಡುವ ಮೂಲಕ ಬದುಕಿನ ಸಾರ್ಥಕತೆಯನ್ನು ಪಡೆಯಬೇಕೆಂದು ಸಿಂಧನೂರಿನ ಬಸವ ಕೇಂದ್ರ ಅಧ್ಯಕ್ಷ ವೀರಭದ್ರಗೌಡ ಕುರಕುಂದಿ ಹೇಳಿದರು.
ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್ ಡಾ. ಲಿಂಗರಾಜ ಧರ್ಮಪ್ಪ ಹೊರಕೇರಿ ಅವರ ನಿವಾಸದಲ್ಲಿ ಬಸವ ಕೇಂದ್ರವು ಏರ್ಪಡಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮೋಳಗಿ ಮಾರಯ್ಯನವರ ಭಕ್ತ ತಾನು ಮಾಡುವ ಕಾಯಕ ತನಗೆಂದಡೆ ವಚನದ ಅನುಭಾವ ಉಪನ್ಯಾಸ ನೀಡಿದರು.
ಸತ್ಯ ಶುದ್ಧವಾದ ಕಾಯಕಗಳನ್ನು ಮಾಡಿ ಎಲ್ಲರೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು. ಇನ್ನೊಬ್ಬರ ಮನಸ್ಸನ್ನು ಅರ್ಥೈಸಿಕೊಂಡು, ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು. ಕಾಯಕದಲ್ಲಿ ಮೇಲು ಕೀಳು ಎಂಬುದಿಲ್ಲ ಎನ್ನುವುದನ್ನು ಅರಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಸಾವಕಾರ ಮಾತನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ, ಕೇಂದ್ರದ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು. ಬಿ.ಎಲ್ ಲಿಂಗಶೆಟ್ಟರ, ಡಾ. ಎಂ.ಆರ್. ಪಾಟೀಲ ಉಪಸ್ಥಿತರಿದ್ದರು.
ಬಸವರಾಜ ಕೆಂಧೂಳಿ ಪ್ರಾರ್ಥಿಸಿದರು, ಬಸವ ಕೇಂದ್ರದ ಕಾರ್ಯಾಧ್ಯಕ್ಷ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಜಾನಪದ ತ ಡಾ. ರಾಮೂ ಮೂಲಗಿ ಬಸವಣ್ಣನವರ ಕುರಿತು ಜಾನಪದ ಗೀತೆ ಹಾಡಿದರು.
ಡಾ. ಸುರೇಶ ಹೊರಕೇರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಕಾಶ ಮನೋಳ್ಳಿ ವಂದಿಸಿದರು.