ರೋಗ ನಿಯಂತ್ರಣಕ್ಕೆ ಲಸಿಕೆಯೊಂದೇ ಮಾರ್ಗ

23 LNG 01
ಲಿಂಗಸುಗೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ವಕೀಲ ಇತರರಿದ್ದರು.
Published on

ಲಿಂಗಸುಗೂರು: ಜಾನುವಾರುಗಳಲ್ಲಿ ಕಾಲುಬಾಯಿ ರೋಗ ತಡೆಗಟ್ಟಲು ಸರ್ಕಾರ 2019 ರಿಂದ ಲಸಿಕಾ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಲಸಿಕೆ ಹಾಕಿಸಿ ಜಾನುವಾರುಗಳನ್ನು ಕಾಲುಬಾಯಿ ರೋಗದಿಂದ ರಕ್ಷಿಸಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿಯಲ್ಲಿ ಕಾಲುಬಾಯಿ ರೋಗ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪ್ರತಿವರ್ಷ ಕಾಲುಬಾಯಿ ರೋಗ ಲಸಿಕೆ ಅಭಿಯಾನ ನಡೆಸಲಾಗುತ್ತಿದ್ದು, ಕಾಲುಬಾಯಿ ರೋಗ ತಡೆಗೆ ಲಸಿಕೆ ಹಾಕಿಸುವುದೊಂದೇ ಮಾರ್ಗವಾಗಿದೆ ಎಂದರು.

ಪಶು ವೈದ್ಯಾಧಿಕಾರಿ ರಾಚಪ್ಪ ಮಾತನಾಡಿ, ಕಾಲುಬಾಯಿ ಲಸಿಕಾ ಅಭಿಯಾನ ನ.20 ರವರೆಗೆ ನಡೆಯಲಿದೆ. ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಅತಿಯಾದ ಜ್ವರ, ಬಾಯಿ ಹುಣ್ಣು, ಜೊಲ್ಲು ಸುರಿಯುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವುದು ಕಾಲುಬಾಯಿ ರೋಗದ ಲಕ್ಷಣಗಳಾಗಿವೆ. ರೋಗ ಪೀಡಿತ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಉಪಚರಿಸಬೇಕು.

ಕಾಲುಬಾಯಿ ರೋಗದಿಂದ ಜಾನುವಾರುಗಳನ್ನು ರಕ್ಷಿಸಲು ಸತತ ಕನಿಷ್ಠ ಎರಡು ಬಾರಿ ಲಸಿಕೆ ಹಾಕಿಸಬೇಕು. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕಾ ಅಭಿಯಾನದಲ್ಲಿ ತಪ್ಪದೆ ಲಸಿಕೆ ಹಾಕಿಸಬೇಕೆಂದು ಹೇಳಿದರು.

ಪ್ರಮುಖರಾದ ಗಿರಿಮಲ್ಲನಗೌಡ ಪಾಟೀಲ್, ನಾರಾಯಣಪ್ಪ ನಾಯ್ಕ, ಈರಣ್ಣ ಹುರಕಡ್ಲಿ, ಡಾ.ದೇವರಾಜ, ಡಾ.ಪ್ರಭು, ಡಾ.ಅಶ್ವಘೋಷ, ಡಾ.ಪ್ರಶಾಂತ, ಡಾ.ಮಹೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net