

ದಾವಣಗೆರೆ: ಕೋವಿಡ್ ಲಸಿಕೆ ಯಾರ್ಯಾರ ಪಾಲಿಗೆ ಸಂಜೀವಿನಿ ಆಗಿದೆಯೋ ಗೊತ್ತಿಲ್ಲ. ಆದರೆ ದಾವಣಗೆರೆಯಲ್ಲಿ ಮಾತ್ರ ಕಾಂಗ್ರೆಸ್-ಬಿಜೆಪಿ ಮಧ್ಯೆ ರಿಯಾಕ್ಷನ್ (ಅಡ್ಡ ಪರಿಣಾಮ) ಆಗಿರುವುದಂತೂ ಸತ್ಯ!
ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಡಾ.ಜಿ.ಎಂ. ಸಿದ್ದೇಶ್ವರ ನಡುವೆ ಕಳೆದೊಂದು ತಿಂಗಳಿಂದ ಶುರುವಾದ ರಾಜಕೀಯ ಸಮರಕ್ಕೆ ಮಾತ್ರ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ.! ಇಷ್ಟು ದಿನ ಆರೋಪ- ಪ್ರತ್ಯಾರೋಪಗಳಿಗೆ ಸೀಮಿತರಾಗಿದ್ದ ಇಬ್ಬರೂ ಘಟಾನುಘಟಿಗಳು, ಮಂಗಳವಾರ ಸ್ಮಾರ್ಟ್ ಸಿಟಿ ಸಭೆಯಲ್ಲಿ ಮುಖಾಮುಖಿ ಆದಾಗ ಪರಸ್ಪರರಿಗೆ ಟಾಂಗ್ ಕೊಟ್ಟು ಕೊಂಡರು.
ಸೋಮವಾರವಷ್ಟೇ ಸಂಸದರ ವಿರುದ್ಧ ವಾಗ್ದಾಳಿ ಮಾಡಿದ್ದ ಶಾಮನೂರು ಮಂಗಳವಾರವೂ ಕೂಡ ಮುಂದುವರಿಸಿದರು. ಉತ್ತರ ಕೊಡುವ ಅವಕಾಶವನ್ನು ಸಂಸದರೂ ಬಿಟ್ಟುಕೊಡಲಿಲ್ಲ. ಸಭೆ ಆರಂಭವಾಗುತ್ತಿದ್ದಂತೆ ಈ ಊರಿನ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಯಾರು? ಸಂಸದರೇ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದ ಶಾಸಕರು, ನಿಮ್ಮದು ಅತಿಯಾಯಿತು. ಎಲ್ಲದಕ್ಕೂ ಕಾಲ ಬರುತ್ತದೆ ಎಂದು ಹೇಳಿದರು.
ಸೋಮವಾರವಷ್ಟೇ ಸಂಸದರಿಗೆ ಬುದ್ಧಿ ಕಲಿಸಬೇಕು ಎಂದಿದ್ದ ಶಾಸಕರಿಗೆ ಉತ್ತರ ಕೊಡಲು ಕಾಯುತ್ತಿದ್ದ ಸಂಸದರು, ನಿಮ್ಮದೂ ಅತಿಯಾಯಿತು ನಿಮ್ಮ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಇಷ್ಟಕ್ಕೆ ವಾಗ್ಯುದ್ಧ ನಿಲ್ಲಲಿಲ್ಲ. ಮುಖ್ಯಮಂತ್ರಿ ನಿಮ್ಮ ಮಾತು ಕೇಳುತ್ತಾರೆ ಎಂದು ಅಧಿಕಾರಿಗಳನ್ನು ಹೆದರಿಸಿ ಲಸಿಕೆ ತಡೆದಿದ್ದೀರಿ. ಸಿಎಂ ಯಡಿಯೂರಪ್ಪ ಅವರು ನನ್ನ ಜತೆಯೂ ಚೆನ್ನಾಗಿದ್ದಾರೆ ಎಂದು ಶಾಸಕರು ತಿಳಿಸಿದರು.
ನಿಮ್ಮ ಪಾಡಿಗೆ ನೀವು ಲಸಿಕೆ ವಿತರಿಸಿ ಆದರೆ, ಸರ್ಕಾರಿ- ಖಾಸಗಿ ಲಸಿಕೆ ಸೇರಿಸುವುದು ಬೇಡ ಎಂದಿದ್ದೇನೆ. ಆ ಮಾತಿಗೆ ಬದ್ಧ ಎಂದು ಸಂಸದರು ಪುನರುಚ್ಚರಿಸಿದರು.
ಮಧ್ಯಪ್ರವೇಶಿಸಿದ ಸಚಿವ ಬೈರತಿ ಬಸವರಾಜ, ಸರ್ಕಾರಿ ಬ್ಯಾನರ್ ಅಡಿ ಖಾಸಗಿ ಲಸಿಕೆ ವಿತರಣೆ ಬೇಡ. ನಾನು ದಾವಣಗೆರೆಗೆ ರಾಜಕೀಯ ಮಾಡಲು ಬಂದಿಲ್ಲ. ಇಲ್ಲಿಂದ ನಾನೇನೂ ಸ್ಪರ್ಧೆ ಮಾಡಬೇಕಾಗಿಲ್ಲ ಎಂದಾಗ ಶಾಮನೂರು ಬನ್ನಿ ಎಂದು ಆಹ್ವಾನ ನೀಡಿದರು. ನಾನು ಜೋರಾಗಿದ್ದೇನೆ. ಅಷ್ಟು ಹಗುರವಾಗಿ ಪರಿಗಣಿಸಬೇಡಿ ಎಂದು ಸಚಿವರು ಹೇಳಿದರು.