

ರಾಮನಗರ : ಮಕ್ಕಳಿಗೆ ನೀಡಲಾಗುವ ಬಿಸಿಜಿ, ಪೆಂಟಾವೆಲೆಂಟ್, ದಡಾರಾ, ರುಬೆಲ್ಲಾ, ಡಿಟಿಪಿ ವರ್ಧಕ ಮುಂತಾದ ಲಸಿಕೆಯನ್ನು ನೀಡಲು ವಾರದಲ್ಲಿ ಎರಡು ದಿನ ಅಂದರೆ, ಮಂಗಳವಾರ ಮತ್ತು ಬುಧವಾರ ವಿಶೇಷ ಲಸಿಕಾ ಅಭಿಯಾನ ಹಮ್ಮಿಕೊಂಡು ಶೇ.100ರಷ್ಟು ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ನಿಗದಿ ಪಡಿಸಿರುವ ಕಾಲ ಮಿತಿಯಲ್ಲಿ ಲಸಿಕೆ ನೀಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ಲಸಿಕೆ ಪಡೆಯದಿರುವ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವಂತೆ ತಿಳಿಸಿದರು.
ಆರೋಗ್ಯ ಇಲಾಖೆ ಯಾವ ಹಂತದಲ್ಲಿ, ಯಾವ ಲಸಿಕೆ ನೀಡುತ್ತದೆ ಮತ್ತು ಇವುಗಳು ಯಾವ ಕಾಯಿಲೆಯನ್ನು ತಡೆಗಟ್ಟುತ್ತದೆ, ಮುಂದಿನ ಹಂತದ ಲಸಿಕೆ ಯಾವಾಗ ಪಡೆಯಬೇಕು, ಲಸಿಕೆ ಪಡೆಯದಿದ್ದಲ್ಲಿ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಎಂದರು.
ಲಸಿಕೆಗೆ ಸಂಬಂಧಿಸಿದಂತೆ ದಿನ ನಿಗದಿಪಡಿಸಿ ಗುರಿ ಇಟ್ಟುಕೊಂಡು ಬೆಳಗ್ಗೆ ಹಾಗೂ ಮಧ್ಯಾಹ್ನ ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಮತ್ತು ಶಾಲಾ ಮುಖ್ಯಶಿಕ್ಷಕರಿಗೆ ತರಬೇತಿ ನೀಡಿ ಜಾಗೃತಿ ಮೂಡಿಸಲು ಮುಂದಾಗಿ ಎಂದರು. ಜಿಲ್ಲಾದ್ಯಾಂತ ಹುಟ್ಟಿದ ಮಕ್ಕಳ ಮಾಹಿತಿ ಪಡೆದು, ಬಿಸಿಜಿ ಲಸಿಕೆ ಕೊಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಲಸಿಕೆ ಪಡೆಯುವಂತೆ ತಿಳಿಸಬೇಕು ಎಂದರು.
ಮಕ್ಕಳಿಗೆ ನೀಡುವ ಲಸಿಕೆ ವಿವರ: ಮಕ್ಕಳು ಹುಟ್ಟಿದ ಕೂಡಲೇ ಬಿಸಿಜಿ, ಒಪಿವಿ ಹಾಗೂ ಹೆಪಪೈಟಿಸ್-ಬಿ ಲಸಿಕೆಯನ್ನು ಪಡೆಯಬೇಕು. ಕಾರಣಾಂತರದಿಂದ ಲಸಿಕೆ ಪಡೆಯದಿದ್ದಲ್ಲಿ ಬಿಸಿಜಿಯನ್ನು 1 ವರ್ಷದೊಳಗೆ, ಒಪಿವಿಯನ್ನು ಮಗು ಹುಟ್ಟಿದ 15 ದಿನಗಳ ಒಳಗೆ ಹಾಗೂ ಹೆಪಪೈಟಿಸ್-ಬಿ ಲಸಿಕೆಯನ್ನು ಹುಟ್ಟಿದ 24 ಗಂಟೆಯೊಳಗೆ ಪಡೆಯಬಹುದಾಗಿದೆ ಎಂದು ರಾಕೇಶ್‌ಕುಮಾರ್ ತಿಳಿಸಿದರು.
6 ವಾರದ ಮಗು ಒಪಿವಿ -1, ರೊಟಾ-1, ಐಪಿವಿ-1 ಹಾಗೂ ಪೆಟಾವೆಲೆಂಟ್-1 ಲಸಿಕೆ ಪಡೆಯಬೇಕು. 10 ವಾರದ ಮಗು ಒಪಿವಿ-2, ರೊಟಾ-2 ಹಾಗೂ ಪೆಟಾವೆಲೆಂಟ್-2 ಹಾಗೂ 14 ವಾರದ ಮಗು ಒಪಿವಿ-3, ರೊಟಾ-3, ಐಪಿವಿ-2 ಹಾಗೂ ಪೆಟಾವೆಲೆಂಟ್-3 ಪಡೆಯಬೇಕು. ಕಾರಣಾಂತರಗಳಿಂದ ಒಪಿವಿ ಲಸಿಕೆಯನ್ನು ಪಡೆಯದಿದ್ದಲ್ಲಿ 5 ವರ್ಷದವರೆಗೆ, ಐಪಿವಿ, ಪೆಟಾವೆಲೆಂಟ್ ಹಾಗೂ ರೊಟಾ ಲಸಿಕೆಯನ್ನು 1 ವರ್ಷ ವಯಸ್ಸಿನವರೆಗೆ ಪಡೆಯಬಹುದಾಗಿದೆ ಎಂದರು.
9 ತಿಂಗಳಿನ ಮಗು ದಡಾರ, ರುಬೆಲ್ಲಾ-1, ಜೆಇ 1 ಲಸಿಕೆ ಪಡೆಯಬೇಕು. ಕಾರಣಾಂತರಗಳಿಂದ ಪಡೆಯದಿದ್ದಲ್ಲಿ ದಡಾರ, ರುಬೆಲ್ಲಾ ಲಸಿಕೆಯನ್ನು 5 ವರ್ಷದವರೆಗೆ, ಹಾಘೂ ಜೆಇ ಲಸಿಕೆಯನ್ನು 15 ವರ್ಷದವರೆಗೆ ಪಡೆಯಬಹುದು. 16-24 ತಿಂಗಳಿನ ಮಗು ದಡಾರ, ರುಬೆಲ್ಲಾ-2, ಜೆಇ-2, ಒಪಿವಿ ವರ್ಧಕ, ಡಿಪಿಟಿ ವರ್ಧಕ-1 ಲಸಿಕೆ ಪಡೆಯಬೇಕು, ಪಡೆಯದಿದ್ದಲ್ಲಿ ಡಿಪಿಟಿ ವರ್ಧಕ 7 ವರ್ಷದವರೆಗೆ ಪಡೆಯಬಹುದಾಗಿದೆ ಎಂದರು.
ಜಿಪಂ ಸಿಇಇಒ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ವೈದ್ಯಾಧಿಕಾರಿ ಡಾ.ನಾಗರಾಜು, ಆರ್‌ಸಿಎಚ್‌ಒ ಡಾ. ಪದ್ಮಾ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.