ಜನರಿದ್ದಲ್ಲಿಗೆ ಕೋವಿಡ್ ನಿರೋಧಕ ಲಸಿಕೆ

h28-covaccine
Published on

ಮಂಗಳೂರು; ಕೋವಿಡ್ ನಿರೋಧಕ ಲಸಿಕೆ ಮತ್ತು ವೈದ್ಯಕೀಯ ತಂಡಗಳು ಮುಂದಿನ ದಿನಗಳಲ್ಲಿ ನಿರ್ದಿಷ್ಟ ಜನವಸತಿ ಪ್ರದೇಶಗಳಲ್ಲಿ ಲಸಿಕೆ ಅಭಿಯಾನ ಆರಂಭಿಸಲಿವೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಅರ್ಹ ಖಾಸಗಿ ಆಸ್ಪತ್ರೆಗಳು ಇದರ ನಿರ್ವಹಣೆ ಜವಾಬ್ದಾರಿ ವಹಿಸಲಿವೆ.

ಲಸಿಕೆ ಹಾಕುವ ಸಂದರ್ಭ ವೈದ್ಯರು, ಅಗತ್ಯ ಇತರ ಸಿಬ್ಬಂದಿ ವರ್ಗದ ಉಪಸ್ಥಿತಿ ಹಾಗೂ ತುರ್ತು ಸಂದರ್ಭವನ್ನು ನಿರ್ವಹಿಸುವ ವ್ಯವಸ್ಥೆ ಇರುವುದನ್ನು ಖಾತ್ರಿಪಡಿಸುವ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡಲು ಅನುಮತಿ ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ.

ಪ್ರಸ್ತುತ ಲಸಿಕೆಗಾಗಿ ಜನರ ಬೇಡಿಕೆ ಹೆಚ್ಚಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗುತ್ತಿಲ್ಲ. ಕೋವಿಡ್ ಎರಡನೆಯ ಅಲೆಯ ಆಕ್ರಮಣಕಾರಿ ಸ್ವಭಾವದಿಂದ ದೇಶದಾದ್ಯಂತ ಯುವಜನರ ಸಹಿತ ದೊಡ್ಡ ಸಂಖ್ಯೆಯ ಜನರು ಅಸುನೀಗುತ್ತಿರುವುದರಿಂದ ತೀವ್ರ ಆತಂಕಕ್ಕೊಳಗಾಗಿರುವ ಜನರು ಕೋವಿಡ್ ನಿರೋಧಕ ಲಸಿಕೆ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೊದಲ ಡೋಸ್ ಪಡೆದಿರುವ ಅನೇಕರಿಗೆ ಎರಡನೇ ಡೋಸ್ ನಿಗದಿತ ಅವಧಿಯೊಳಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೋ ಎನ್ನುವ ಆತಂಕವೂ ಇದೆ.

ಈ ನಡುವೆ, ಮಂಗಳೂರಿನಲ್ಲಿ ವಸತಿ ಸಮುಚ್ಚಯ ಮತ್ತು ಜನರು ಕೆಲಸ ಮಾಡುವ ಪ್ರದೇಶ (ವರ್ಕ್ ಸೈಟ್) ಗಳಲ್ಲಿ ಲಸಿಕೆ ಕಾರ್ಯಕ್ರಮ ರೂಪಿಸಲು ಕೆಲವು ಆಸ್ಪತ್ರೆಗಳು ಮುಂದಾಗಿವೆ. ಲಸಿಕೆ ಪಡೆಯಲು ಕನಿಷ್ಠ 50 ಮಂದಿ ಇರಬೇಕು ಮತ್ತು ಲಸಿಕೆ ಹಾಕಲು ಜಾಗದ ವ್ಯವಸ್ಥೆ ಮಾಡಬೇಕು ಎಂದು ಆಸ್ಪತ್ರೆಗಳು ಹೇಳುತ್ತಿವೆ. 18 ವರ್ಷ ಮೇಲ್ಪಟ್ಟವರಿಗೆ ಈ ವ್ಯವಸ್ಥೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತದೆ. ಒಂದು ಡೋಸ್‌ಗೆ ಸುಮಾರು 750 ರೂಪಾಯಿ ದರ ನಿಗದಿ ಮಾಡಲಾಗಿದೆ.

ಈಗಾಗಲೇ ಅನೇಕ ಕಂಪನಿ/ಸಂಸ್ಥೆಗಳು ಸಂಬಂಧಿಸಿದ ಆಸ್ಪತ್ರೆಗಳನ್ನು ಸಂಪರ್ಕಿಸುತ್ತಿವೆ. ಕೈಗಾರಿಕೆಗಳು, ವಿವಿಧ ಸಣ್ಣ, ಮಧ್ಯಮ ಹಾಗೂ ಬೃಹತ್ ಕಂಪನಿಗಳು ಈ ವ್ಯವಸ್ಥೆಗೆ ಒಲವು ತೋರಿಸಿದರೆ ಸರ್ಕಾರದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಬಡವರು ಸರ್ಕಾರಿ ವ್ಯವಸ್ಥೆಯಲ್ಲಿ ಉಚಿತವಾಗಿ ಹಾಗೂ ನಿರಾಳತೆಯಿಂದ ಲಸಿಕೆ ಪಡೆಯುವುದು ಸಾಧ್ಯವಾಗಲಿದೆ.

ಕೆಲವು ಅರ್ಹ ವರ್ಕ್‌ಸೈಟ್‌ಗಳಲ್ಲಿ ಕೋವಿಡ್ ನಿರೋಧಕ ಲಸಿಕೆ ಒದಗಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ಒದಗಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿದೆ. ಆದರೆ ಸಂಬಂಧಿಸಿದ ಆಸ್ಪತ್ರೆಗಳು ಸ್ಥಳೀಯಾಡಳಿತದಿಂದ ಪೂರ್ವಾನುಮತಿ ಪಡೆದಿರಬೇಕು. ಲಸಿಕೆ ನೀಡುವ ಸಂದರ್ಭ ವೈದ್ಯರು ಹಾಗೂ ಅಗತ್ಯ ಇತರ ಸಿಬ್ಬಂದಿ ಇರುವುದನ್ನು ಖಚಿತಪಡಿಸಬೇಕು. ಡಾ.ರಾಜೇಂದ್ರ ಕೆ.ವಿ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ 50ಕ್ಕಿಂತ ಅಧಿಕ ಲಸಿಕೆಗಳಿಗೆ ಬೇಡಿಕೆ ಇರುವ ವರ್ಕ್ ಸೈಟ್ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ತೆರಳಿ ಲಸಿಕೆ ಒದಗಿಸಲು ಕೆ.ಎಸ್.ಹೆಗ್ಡೆ ಆಸ್ಪತ್ರೆ ತಂಡ ಸಿದ್ಧತೆ ನಡೆಸಿದೆ. ಎಂಆರ್‌ಪಿಎಲ್, ಎಂಎಸ್‌ಇಜಡ್, ಎನ್‌ಐಟಿಕೆ ಸಹಿತ ಜಿಲ್ಲೆಯ ವಿವಿಧೆಡೆಗಳಿಂದ ಬೇಡಿಕೆ ಬಂದಿದ್ದು, ಈ ವಾರದಲ್ಲಿ ಹೊಸ ಕಾರ್ಯಕ್ರಮಕ್ಕೆ ಚಾಲನೆ ದೊರೆಯಬಹುದು. ಹೇಮಂತ್ ಶೆಟ್ಟಿ ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೆ.ಎಸ್.ಹೆಗ್ಡೆ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net