ಮುಂಡಗೋಡದಲ್ಲಿ ಲಸಿಕಾಕರಣ ಆರಂಭ

Vacination to animals
Published on

ಮುಂಡಗೋಡ: ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಲು ಹಾಗೂ ಬಾಯಿ ಬೆನೆ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಪಶು ಆರೋಗ್ಯ ಕೆಂದ್ರದವರು ಲಸಿಕಾ ಅಭಿಯಾನ ಆರಂಭಿಸಿದ್ದಾರೆ.

ಯಾಂತ್ರಿಕೃತವಾಗಿ ಕೃಷಿ ಚಟುವಟಿಕೆಗಳನ್ನು ಹೆಚ್ಚಿನ ರೈತರು ಕೈಗೊಳ್ಳುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ದನಕರುಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗುತ್ತಿದೆ ಸದ್ಯ ತಾಲೂಕಿನಲ್ಲಿ 22,856ದನಕರುಗಳಿವೆ. ಕಳೆದ ಎರಡು ವಾರಗಳಿಂದ ತಾಲೂಕಿನ ಕೆಲ ದನಗಳಲ್ಲಿ ಕಾಲುಬೆನೆ ಕಾಣಣಿಸಿಕೊಂಡಿದ್ದು ಇದರಿಂದಾಗಿ ದನಕರುಗಳು ಓಡಾಡಲು ತೊಂದರೆ ಅನುಭವಿಸುತ್ತಿವೆ.

ರೋಗದ ಲಕ್ಷಣಗಳು: ರೋಗ ಬಂದ ಎತ್ತು, ಹೋರಿ, ಹಸು, ಎಮ್ಮೆ, ಹಂದಿಗಳಲ್ಲಿ ಅತಿಯಾದ ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸುರಿಸುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸುತ್ತವೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವ ಪರಿಣಾಮ ರೋಗಗ್ರಸ್ತ ಪ್ರಾಣಿಗಳಿಂದ ನೇರ ಸಂಪರ್ಕ, ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು, ಗಾಳಿಯ ಮುಖಾಂತರ, ದನಗಳ ಸಂತೆ ಹಾಗೂ ಜಾತ್ರೆಗಳಿಂದ ಹರಡುತ್ತವೆ.

ರೋಗ ತಡೆಗಟ್ಟುವಿಕೆ ಹೇಗೆ

  • ರೋಗಪೀಡಿತ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಉಪಚರಿಸುವುದು
  • ಶುಚಿತ್ವಕ್ಕೆ ಮಹತ್ವ ನೀಡಿ ಕ್ರಿಮಿನಾಶಕ ದ್ರಾವಣವನ್ನು ಬಳಸಿ ದಿನಕ್ಕೆ 3-4ಬಾರಿ ಕೊಟ್ಟಿಗೆ ಮತ್ತು ಆವರಣ ಶುಚಿಗೊಳಿಸುವುದು
  • ರೋಗಪೀಡಿತ ಜಾನುವಾರುಗಳನ್ನು ಉಪಚರಿಸುವುವವರು ಜಾನುವಾರು ಮಾಲಿಕರ ಸಂಪರ್ಕದಿಂದ ದೂರ ಇರುವುದು
  • ರೋಗಪೀಡಿತ ಜಾನುವಾರುಗಳಿಗೆ ಲಸಿಕೆ ಹಾಕಿಸಿ 21ದಿನಗಳ ನಂತರ ಜಾತ್ರೆ, ಸಂತೆಗಳಲ್ಲಿ ಮಾರಾಟಕ್ಕೆ ಕಟ್ಟಬೇಕು.

ಹತೋಟಿಯಲ್ಲಿ ಚರ್ಮಗಂಟು ರೋಗ

ಕಳೆದ ಎರಡು ವರ್ಷಗಳಿಂದ ದನಕರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು ಕಳೆದ ವರ್ಷ ಚರ್ಮಗಂಟು ರೋಗ ಕಾಯಿಲೆಯಿಂದ ಮೂವತ್ತಕ್ಕೂ ಹೆಚ್ಚು ದನಕರುಗಳು ಸಾವು ಕಂಡಿದ್ದವು. ಈ ವರ್ಷ ಸಹ ಐದಕ್ಕೂ ಹೆಚ್ಚು ದನಗಳ ಸಾವನ್ನಪ್ಪಿವೆ ಎಂದು ಪಶು ಆಸ್ಪತ್ರೆಯವರು ತಿಳಿಸಿದ್ದಾರೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಚರ್ಮಗಂಟು ರೋಗ ಸ್ವಲ್ಪ ಹತೋಟಿಯಲ್ಲಿದೆ.

ತಾಲೂಕಿನ ಕೆಲವಡೆ ಕಾಲು ಹಾಗೂ ಬಾಯಿಬೆನೆ ರೋಗವು ಕಾಣಿಸಿಕೋಳ್ಳುವ ಮುಂಜಾಗ್ರತೆ ಕ್ರಮವಾಗಿ ತಾಲೂಕಿನಾದ್ಯಂತ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಜಾನುವಾರುಗಳ ಮಾಲಿಕರು ಮುಂಜಾಗ್ರತೆ ಕ್ರಮ ಅನುಸರಿಸಬೇಕು. | ಡಾ.ಕೃಷ್ಣಮೂರ್ತಿ ಹೆಗಡೆ. ವೈದ್ಯಾಧಿಕಾರಿಗಳು.ಪಶು ಆಸ್ಪತ್ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net