ಅರಕಲಗೂಡು: ತಾಲೂಕಿನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ವತಿಯಿಂದ ಉಚಿತ ಸಾಮೂಹಿಕ ಕಾಲು, ಬಾಯಿ ರೋಗ ನಿರೋಧಕ ಲಸಿಕಾ ಅಭಿಯಾನವನ್ನು ಅ.21 ರಿಂದ ನ.20 ರವರೆಗೆ 30 ದಿನಗಳವರೆಗೆ ಹಮ್ಮಿಕೊಂಡಿದೆ ಎಂದು ಪಶು ವೈದ್ಯಕೀಯ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎ.ಡಿ.ಶಿವರಾಮ್ ತಿಳಿಸಿದ್ದಾರೆ.
ತಾಲೂಕಿನಲ್ಲಿ 94,195 ಜಾನುವಾರುಗಳಿವೆ. 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಕರುಗಳು, ತುಂಬು ಗರ್ಭಾವಸ್ಥೆಯಲ್ಲಿರುವ ಹಾಗೂ ರೋಗಪೀಡಿತ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ಕೆ 5 ತಂಡಗಳನ್ನು ರಚಿಸಿದ್ದು ಒಂದು ತಂಡದಲ್ಲಿ 9 ಜನರಂತೆ 45 ಲಸಿಕೆದಾರರು ಇರುತ್ತಾರೆ. ಬೆಳಗ್ಗೆ 7 ರಿಂದ 10.30 ರವರೆಗೆ ಲಸಿಕೆ ಹಾಕುವ ಕಾರ್ಯ ನಡೆಯಲಿದೆ. ಹಿಂದಿನ ದಿನ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಈ ಕುರಿತು ಪ್ರಚಾರ ಕಾರ್ಯ ನಡೆಸುತ್ತಾರೆ. ಜನರ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲಾಗುವುದು. ತಾಲೂಕಿನ ಕೊಡಕಹಳ್ಳಿ ಗ್ರಾಮದಲ್ಲಿ ಅ.21 ರಂದು ಜಾನುವಾರು ಆರೋಗ್ಯ ಶಿಬಿರ ಆಯೋಜಿಸಿದ್ದು ಹಾಲು ಕರೆಯುವ ಸ್ಫರ್ಧೆ, ಮಿಶ್ರತಳಿ ಕರುಗಳ ಪ್ರದರ್ಶನ ನಡೆಯಲಿದೆ. ಸುತ್ತಮುತ್ತಲ ಗ್ರಾಮಸ್ಥರು ಇದರ ಉಪಯೋಗ ಪಡೆಯುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.