

ನರಗುಂದ: ಮಕ್ಕಳಿಗೆ ರೋಗಗಳು ಬರದಂತೆ ತಡೆಯಲು ಸರ್ಕಾರದಿಂದ ಐದು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ಮಿಷನ್ ಇಂದ್ರಧನುಷ 5.0 ಅಭಿಯಾನದಡಿ ಉಚಿತ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 3 ಹಂತಗಳಲ್ಲಿ ತಾಲೂಕಿನಲ್ಲಿ ಲಸಿಕೆ ವಿತರಣೆ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರೇಣುಕಾ ಕೊರವನವರ ಹೇಳಿದರು.
ತಾಲೂಕಿನ ಜಗಾಪೂರ ಗ್ರಾಮದ ಶ್ರೀಮಾರುತಿ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಜಗಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲಾ ದಾಖಲಾತಿಯಿಂದ ಕೈಬಿಟ್ಟು ಹೋಗಿರುವ ಹಾಗೂ ಲಸಿಕೆ ವಂಚಿತ 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ಉಚಿತವಾಗಿ ಅವರ ವಯಸ್ಸಿಗೆ ಅನುಗುಣವಾಗಿ ಪ್ರಥಮ ಹಂತದಲ್ಲಿ ಆ.7 ರಿಂದ 12ರ ವರೆಗೆ ಲಸಿಕೆ ನೀಡಲಾಗುತ್ತದೆ. ದ್ವಿತೀಯ ಹಂತದ ಲಸಿಕೆಯನ್ನು ಸೆ.11 ರಿಂದ 16 ರವರೆಗೆ, ತೃತೀಯ ಹಂತವನ್ನು ಅಕ್ಟೋಬರ್-9ರಿಂದ 14ರವರೆಗೆ ಒಟ್ಟು 3 ತಿಂಗಳಲ್ಲಿ ಮೂರು ಹಂತದ ಕಡ್ಡಾಯ ಲಸಿಕೆ ವಿತರಣೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಬಿಸಿಜಿ, ಪೆಂಟಾವೈಲೆಂಟ್, ಪೋಲಿಯೋ, ರೋಟಾ ವೈಲೆಂಟ್, ಪಿಸಿವಿ, ಐಪಿವಿ, ಜೆಇ ಮತ್ತು ಎಂಆರ್ ಲಸಿಕೆ ಹಾಕಲಾಗುವುದು ಎಂದರು.
ಜಗಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಖಿಲ್ ಪಾಟೀಲ ಮಾತನಾಡಿ, ಲಸಿಕೆ ನೀಡುವುದರಿಂದ ಮಕ್ಕಳಿಗೆ ಒಕ್ಕರಿಸಿಕೊಳ್ಳಬಹುದಾದ ವಿವಿಧ 12 ಬಗೆಯ ಮಾರಕ ರೋಗಗಳಿಂದ ರಕ್ಷಿಸಬಹುದು ಎಂದರು.
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆರೋಗ್ಯ ಇಲಾಖೆಯ ತಾಲೂಕು ಮೇಲ್ವಿಚಾರಕಿ ಎಂ.ಪಿ. ಶಿಗ್ಗಾಂವಕರ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಶಾಂತವ್ವ ದೇವಕ್ಕಿ, ಸದ್ಯಸರಾದ ಭಗವಂತಪ್ಪ ಜಲಗೇರಿ, ಬಸವರಡ್ಡಿ ಕಾಮರಡ್ಡಿ, ನಿರ್ಮಲಾ ಸತರಡ್ಡಿ, ಲಕ್ಷ್ಮೀ ಕುರ್ಲಗೇರಿ, ಸಿ.ಎಫ್. ಕುಂಬಾರ. ಎಸ್.ಆರ್. ಹಿಪ್ಲಿ, ಎಸ್.ಜಿ. ಬಾನಿ, ರೇಖಾ ಹಿರೆಹೋಳಿ, ಮಂಜುಳಾ ಜಾಲಿಕಟ್ಟಿ, ಮಂಜುಳಾ ದುಂದೂರ, ತ್ರಿವೇಣಿ ಬನಪ್ಪನವರ, ಮಂಜುಳಾ ಅಣ್ಣಿಗೇರಿ, ಸುಶೀಲಾ ನಾಗರಹಳ್ಳಿ ಇತರರಿದ್ದರು. ಜಿ.ವಿ.ಕೊಣ್ಣೂರ, ನಾಗರಾಜ ವಿಠ್ಠಪ್ಪನವರ ನಿರ್ವಹಿಸಿದರು.