ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಿ

ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಿ
Published on

ಅರಕಲಗೂಡು: ಹೈನುಗಾರಿಕೆ ಉದ್ಯಮದ ಪ್ರಗತಿಗೆ ಪಣ ತೊಟ್ಟಿರುವ ಸರ್ಕಾರ 2030ರ ವೇಳೆಗೆ ದೇಶ, ರಾಜ್ಯವನ್ನು ಕಾಲು ಬಾಯಿ ಜ್ವರದ ರೋಗಮುಕ್ತವನ್ನಾಗಿ ಮಾಡಲು ಮುಂದಾಗಿದೆ, ಎಲ್ಲರೂ ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎ.ಡಿ.ಶಿವರಾಮು ತಿಳಿಸಿದರು.

ತಾಲೂಕಿನ ಕೊಡಕಳ್ಳಿ ಗ್ರಾಮದಲ್ಲಿ ಪಶುಪಾಲನಾ ಇಲಾಖೆ, ದೊಡ್ಡಮಗ್ಗೆ ಗ್ರಾಪಂ, ಬ್ಯಾಂಕ್ ಆಫ್ ಬರೋಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪದಕಾರ ಸಹಕಾರ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜಾನುವಾರು ಅರೋಗ್ಯ ಶಿಬಿರದ ಕಾರ್ಯಕ್ರಮದಲ್ಲಿ ಗೋವು ಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಜಾನುವಾರುಗಳಿಗೆ 6ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಾಲೂಕಿನಲ್ಲಿ ಪ್ರಥಮವಾಗಿ ಇಲ್ಲಿ ಜಾನುವಾರು ಅರೋಗ್ಯ ಶಿಬಿರ ಹಮ್ಮಿಕೊಂಡಿದ್ದೇವೆ ಎಂದರು.

ಶಿಬಿರದಲ್ಲಿ ಕರುಗಳ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ, ಜಾನುವಾರು ಅರೋಗ್ಯ ಶಿಬಿರ ಸೇರಿದಂತೆ ಹೈನುಗಾರಿಕೆ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 452 ಹಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ, 425 ಜಾನುವಾರುಗಳಿಗೆ ಜಂತು ಹುಳು ನಾಶಕ ಔಷಧ ನೀಡಿದ್ದೇವೆ. ಹಾಲು ಕರೆಯುವ ಸ್ಪರ್ಧೆಯಲ್ಲಿ 58 ಹಸುಗಳು ಭಾಗವಹಿಸಿದ್ದು, ಅದರಲ್ಲಿ 19 ಹಸುಗಳನ್ನು ಆಯ್ಕೆ ಮಾಡಿ ಪ್ರಥಮ ಬಹುಮಾನವಾಗಿ 5 ಸಾವಿರ ರೂ ನಗದು, ಬಕೆಟ್ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತಿದೆ. ಅದರಂತೆ ಸ್ಪರ್ಧೆಯಲ್ಲಿ ರಾಜು ಅವರ ಹಸು 28 ಲೀಟರ್ ಹಾಲು ಕರೆದು ಪ್ರಥಮ ಬಹುಮಾನ ಪಡೆದುಕೊಂಡರೆ, ಲಕ್ಷ್ಮೇಗೌಡ ಅವರ ಹಸು 25 ಲೀ. ನೀಡುವ ಮೂಲಕ ದ್ವಿತೀಯ, ನಂಜುಂಡೇಗೌಡರ ಹಸು 20 ಲೀ. ಹಾಲು ನೀಡುವ ಮೂಲಕ ತೃತೀಯ ಹಾಗೂ ಬಸವೇಗೌಡ ಅವರ ಹಸು 19 ಲೀ.ನೀಡುವ ಮೂಲಕ ಸಮಾಧಾನಕರ ಬಹುಮಾನ ಪಡೆದುಕೊಂಡಿದೆ. 20 ಮಿಶ್ರತಳಿ ಕರುಗಳು ಭಾಗವಹಿಸಿದ್ದು, ಎಲ್ಲಾ ಹಸುಗಳಿಗೂ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.

ಶಿಬಿರದಲ್ಲಿ ಭಾಗವಹಿಸಿದ್ದ 18 ಶ್ವಾನಗಳಿಗೆ ಹುಚ್ಚ ರೋಗದ ವಿರುದ್ಧದ ಲಸಿಕೆ, 91 ಕುರಿ, ಮೇಕೆಗಳಿಗೆ ಗಂಟು ರೋಗದ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ದೊಡ್ಡಮಗ್ಗೆ ಗ್ರಾಪಂ ಅಧ್ಯಕ್ಷ ಅಶೋಕ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಮುಖಂಡರಾದ ಎಂ.ಆರ್. ಮಂಜುನಾಥ್, ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net