ಪ್ರತಿಯೊಬ್ಬ ಮಗುವಿಗೆ ಲಸಿಕೆ ನೀಡಿ

BLY- 11-2
ಕೇಂದ್ರದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಪೊಸ್ಟರ್ ಬಿಡುಗಡೆ ಮಾಡುವ ಮೂಲಕ ಮೇಯರ್ ಡಿ.ತ್ರಿವೇಣಿ ಚಾಲನೆ ನೀಡಿದರು. ಉಪ ಮೇಯರ್ ಬಿ.ಜಾನಕಿ, ಪಾಲಿಕೆ ಸದಸ್ಯ ರಾಜಶೇಖರ್, ಡಾ.ಆರ್.ಎಸ್.ಶ್ರೀಧರ್ ಇತರರಿದ್ದರು.
Published on

ಬಳ್ಳಾರಿ : ಮಗುವಿನ ಆರೋಗ್ಯಕ್ಕಾಗಿ ನೀಡುವ ಲಸಿಕೆಗಳಿಗೂ ಆದ್ಯತೆ ನೀಡಿ ಆರೋಗ್ಯವಂತ ಮಗುವನ್ನಾಗಿ ರೂಪಿಸಲು ಪ್ರತಿಯೊಬ್ಬರೂ ಲಸಿಕೆ ಹಾಕಿಸಲು ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ತಿಳಿಸಿದರು.

ನಗರದ ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 2ನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳಿಗೆ ಹುಟ್ಟಿನಿಂದ ಐದು ವರ್ಷದೊಳಗಡೆ ನೀಡುವ ಲಸಿಕೆಗಳನ್ನು ತಪ್ಪದೆ ಹಾಕಿಸುವ ಮೂಲಕ ಮಗುವಿನ ಬಾಲ್ಯದಲ್ಲಿ ಕಂಡುಬರುವ ಮಾರಕ ರೋಗಗಳನ್ನು ತಡೆಗಟ್ಟುವ ಮೂಲಕ ಸಧೃಡ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಜಿಲ್ಲೆಯಲ್ಲಿ ಹುಟ್ಟಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಹನ್ನೆರಡು ಮಾರಕ ರೋಗಗಳಾದ ಪೊಲಿಯೋ, ಬಾಲಕ್ಷಯ, ಕಾಮಾಲೆ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ನ್ಯೂಮೋಕೊಕಲ್ ನ್ಯೂಮೋನಿಯಾ, ರೋಟಾವೈರಸ್, ದಡಾರ-ರೂಬೆಲ್ಲಾ, ಮಿದುಳು ಜ್ವರ, ಇರುಳುಗಣ್ಣು ಕಾಯಿಲೆಗಳಿಗೆ ಸಂಬಂಧಿಸಿದಂತೆ ಹುಟ್ಟಿದ ತಕ್ಷಣ ಹಾಗೂ ಮಗುವಿನ ವಯಸ್ಸು ಒಂದುವರೆ ತಿಂಗಳು, ಎರಡುವರೆ ತಿಂಗಳು, ಮೂರುವರೆ ತಿಂಗಳು, ಒಂಬತ್ತನೇ ತಿಂಗಳು ಅವಧಿಯಲ್ಲಿ ಪೂರ್ಣವಾಗಿ ಲಸಿಕೆ ಹಾಕಲಾಗುತ್ತದೆ ತಪ್ಪದೆ ಎಲ್ಲರೂ ಮಕ್ಕಳಿಗೂ ಕೊಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಜಿಲ್ಲೆಯಲ್ಲಿ 1,506 ತಾಯಂದಿರು, 6,541 ಮಕ್ಕಳು (0 ಯಿಂದ 2 ವರ್ಷದೊಳಗಿನ ಮಕ್ಕಳು), ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಒಟ್ಟು 101 ವಲಸೆ ಪ್ರದೇಶಗಳನ್ನು ಗುರುತಿಸಿ ಲಸಿಕೆ ಹಾಕಲಾಗುತ್ತಿದೆ. ಒಂದು ಸಂಚಾರಿ ತಂಡವು ಸೇರಿದಂತೆ 374 ಲಸಿಕಾ ಅಧಿವೇಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇಂದ್ರಧನುಷ್ ಲಸಿಕಾ ಅಭಿಯಾನದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ತಾಯಂದಿರು ತಮ್ಮ ಮಕ್ಕಳಿಗೆ ಸಕಾಲದಲ್ಲಿ ಲಸಿಕೆಗಳನ್ನು ಹಾಕಿಸುವ ಮೂಲಕ ಆರೋಗ್ಯಯುತ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಜಾಗೃತಿ ಮೂಡಿಸಲಾಯಿತು.

ಪಾಲಿಕೆ ಉಪ ಮೇಯರ್ ಬಿ.ಜಾನಕಿ, ಪಾಲಿಕೆ ಸದಸ್ಯ ರಾಜಶೇಖರ್, ಡಾ.ಆರ್.ಎಸ್.ಶ್ರೀಧರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನಾ ಕುಮಾರಿ, ವೈದ್ಯಾಧಿಕಾರಿ ಡಾ.ಶಗುಪ್ತಾ ಶಾಹಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ನರ್ಸಿಂಗ್ ಅಧಿಕಾರಿ ಗಿರೀಶ್, ನಗರ ಯೋಜನಾ ವ್ಯವಸ್ಥಾಪಕ ಸುರೇಶ್, ಬಿಪಿಎಂ ಮೇಘರಾಜ್ ಸೇರಿದಂತೆ ತಾಯಂದಿರು, ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net