

ಜಮಖಂಡಿ : ಭವಿಷ್ಯತ್ತಿನ ಮಕ್ಕಳ ಆರೋಗ್ಯ ಸದೃಢವಾಗಿದ್ದರೆ ಮಾತ್ರ ಭವ್ಯ ಭಾರತ ನಿರ್ಮಾಣಗೊಳ್ಳಲು ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಭಾಗೃಹದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಇಂದ್ರಧನುಷ್ 5.0 ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನ ಶಕ್ತಿ, ಯುಕ್ತಿ ಬಳಸಿ ಇಂತಹ ಪ್ರಯೋಜನಕಾರಕ ಔಷಧೋಪಚಾರ ಕಂಡು ಹಿಡಿದು ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡುವಲ್ಲಿ ಸರ್ಕಾರದ ಕಾರ್ಯ ಅವಿಸ್ಮರಣೀಯವಾಗಿದೆ ಎಂದರು.
ಇದನ್ನೂ ಓದಿ: ಮಕ್ಕಳನ್ನು ಆರೋಗ್ಯವಂತರನ್ನಾಗಿಸಿ
ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳ ಭವಿಷ್ಯತ್ತಿನ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಕಾಯಕ ಜೀವಿಗಳಾದಾಗ ಮಾತ್ರ ಆರ್ಥಿಕವಾಗಿ ಭಾರತ ಸದೃಢವಾಗಬಲ್ಲದು. ಪ್ರತಿಯೊಂದರಲ್ಲಿ ಭಾರತ ಸ್ವಾಲಂಬಿಯಾಗಿದೆ. ವಿಶ್ವದಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಬರುವ ದಿನಗಳಲ್ಲಿ ಭಾರತ ನಂ.1 ಸ್ಥಾನ ಪಡೆಯಲಿದೆ ಎಂದರು.
ಹಿರಿಯ ವೈದ್ಯ ಐಎಂಎ ಅಧ್ಯಕ್ಷ ಎಚ್.ಜಿ. ದಡ್ಡಿ ಮಾತನಾಡಿ, ನಮ್ಮ ಜೀವನ ಶೈಲಿ ಬದಲಾದಂತೆ ದಿನದಿಂದ ದಿನಕ್ಕೆ ಹೊಸ ಹೊಸ ರೋಗಗಳು ಉತ್ಪತ್ತಿಯಾಗುತ್ತಿವೆ.
ನಿಸರ್ಗದ ವಿರುದ್ಧ ಎಲ್ಲ ಕಾರ್ಯ ಚಟುವಟಿಕೆ ನಡೆದಿರುವುದರಿಂದ ಇಂತಹ ಭಯಾನಕ ರೋಗಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದರು.
ಇದನ್ನೂ ಓದಿ: ಜನಪದ ಕಲೆ ಉಳಿಸಿ ಬೆಳೆಸಿ
ಆರ್‌ಸಿಎಚ್ ಡಾ. ಬಸವರಾಜ ಹುಬ್ಬಳ್ಳಿ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಹಕರಿಸಿ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ವೈದ್ಯಾಧಿಕಾರಿ ಕೆ.ಆರ್. ಬಣ್ಣದ, ಉಪತಹಸೀಲ್ದಾರ್ ಜೆ. ಸತೀಶಕುಮಾರ ಇತರರಿದ್ದರು.
ಮೇಲು ಅಂಬಲಜೇರಿ ಪ್ರಾರ್ಥಿಸಿದರು. ಉಮೇಶ ಜೋಶಿ ಸ್ವಾಗತಿಸಿದರು. ಡಾ. ವಸಂತ ಮುದಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಡಿ. ದನ್ನೂರ ನಿರೂಪಿಸಿದರು. ಡಾ. ಅಪ್ಪಾಸಾಬ ಇನಾಂದಾರ ವಂದಿಸಿದರು.