ವಿ.ಬಸಾಪುರ ಗ್ರಾಮದಲ್ಲಿ ಒತ್ತುವರಿ ತೆರವು

Oplus_131072
Oplus_131072
Published on

ಹಲಗೂರು: ಸಮೀಪದ ವಿ.ಬಸಾಪುರ ಗ್ರಾಮದ ಸರ್ವೇ ನಂ.39, 42, 41, 31, 32 ಮತ್ತು 29 ರಲ್ಲಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ರಸ್ತೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿ ತೆರವು ಗೊಳಿಸಿದರು.

ಹಲಗೂರು-ಮದ್ದೂರು ಮುಖ್ಯ ರಸ್ತೆಯಿಂದ ಹಲಗನದೊಡ್ಡಿಗೆ ತೆರಳುವ ಸಾರ್ವಜನಿಕ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ನೆರೆಹೊರೆಯ ಜಮೀನುಗಳಿಗೆ ಹೋಗಲು ತೊಂದರೆ ಆಗುತ್ತಿದೆ. ಜಮೀನು ಮಾಲೀಕರು, ರೈತರು ಕೃಷಿ ಚಟುವಟಿಕೆಗಳಿಗೆ ಹೋಗಿ ಬರಲು ತೀವ್ರ ತೊಂದರೆ ಪಡಬೇಕಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳನ್ನು ನಿಲ್ಲಿಸು ವಂತಾಗಿದೆ. ಈ ಭಾಗದಲ್ಲಿ ಖಾಸಗಿ ಶಾಲೆ ಇದ್ದು, ಸಂಚರಿಸಲು ವಾಹನ ಸವಾರರು ತ್ರಾಸ ಪಡುವಂತಾಗಿದೆ. ರೈತರು, ಸಾರ್ವಜನಿಕರು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲ ಆಗುವಂತೆ ರಸ್ತೆ ತೆರವು ಮಾಡಿ ಕೊಡಬೇಕೆಂದು ಹಲಗೂರು ಗ್ರಾಮದ ಎಚ್.ವಿ. ಅಶ್ವಿನ್ ಕುಮಾರ್ ಎಂಬವರು ಮಳವಳ್ಳಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.

ಈ ಸಂಬಂಧ ಉನ್ನತ ಅಧಿಕಾರಿಗಳ ಅದೇಶದ ಮೇರೆಗೆ ಹಲಗೂರು ವೃತ್ತದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಮಧುಸೂದನ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಾಲೂಕು ಸರ್ವೇಯರ್ ಎಂ .ಎಸ್. ಬೀರೇಶ್ ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ರಸ್ತೆಯ ಜಾಗವನ್ನು ಗುರುತಿಸಿದರು. ಹಲಗೂರು ಪೊಲೀಸ್ ಠಾಣೆ ಎಎಸ್‌ಐ ಶಿವಣ್ಣ ಮತ್ತು ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಕಾಲು ದಾರಿಯನ್ನು ಜೆ.ಸಿ.ಬಿ. ಯಂತ್ರದ ಮೂಲಕ ತೆರವು ಗೊಳಿಸಿ, ಶಾಲೆ ಮತ್ತು ರೈತರ ಜಮೀನುಗಳಿಗೆ ಸಂಚರಿಸಲು ಅನುವು ಮಾಡಿಕೊಟ್ಟರು.

ಗ್ರಾಮ ಲೆಕ್ಕಿಗರಾದ ಸೋಮಣ್ಣ, ಲತಾ, ಎಎಸ್‌ಐ ಶಿವಣ್ಣ, ಅರ್ಜಿದಾರ ಎಚ್. ವಿ.ಅಶ್ವಿನ್ ಕುಮಾರ್, ಪೊಲೀಸ್ ಸಿಬ್ಬಂದಿ ನಾಗೇಶ, ಚಂದ್ರಕಾಂತ, ಕಂದಾಯ ಇಲಾಖೆಯ ಸುಭಾಷ್ ಭರಣಿ ಸೇರಿದಂತೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net