ವಿವಾದಿತ ಜಮೀನಿನ ತಡೆಯಾಜ್ಞೆ ತೆರವು

25 Budikote KC Rajanna pressmeet
ಬಂಗಾರಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಕೋಲಾರದ ಕೆ.ಸಿ.ರಾಜಣ್ಣ ಮಾತನಾಡಿದರು. ಮುಖಂಡರಾದ ಕೂಟೇರಿ ನಾಗರಾಜ್​ ಇತರರಿದ್ದರು.
Published on

ಬಂಗಾರಪೇಟೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿ ವಗ್ಗಯ್ಯನದಿನ್ನೆ ಹಾಗೂ ಹುದುಕುಳ ಗ್ರಾಮಗಳಲ್ಲಿ ಕಾನ್ಫಿಡೆಂಟ್​ ಗ್ರೂಪ್​ ಅತಿಕ್ರಮಿಸಿಕೊಂಡಿದ್ದ 47.25 ಎಕರೆ ಭೂ ಪ್ರದೇಶವನ್ನು ರದ್ದುಪಡಿಸಿದ್ದ ಜಿಲ್ಲಾಧಿಕಾರಿ ದಿ. ಡಿ.ಕೆ.ರವಿ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್​ 7 ವರ್ಷಗಳ ನಂತರ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳು ವಶಕ್ಕೆ ಪಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕೋಲಾರದ ಕೆ.ಸಿ.ರಾಜಣ್ಣ ಆಗ್ರಹಿಸಿದ್ದಾರೆ.


ಪಟ್ಟಣದ ಪಟ್ಟಾಭಿಷೇಕೋದ್ಯಾನವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7 ವರ್ಷಗಳಿಂದ ರಾಜ್ಯ ಸರ್ಕಾರವು ಡಿ.ಕೆ.ರವಿ ಅವರ ಆದೇಶಕ್ಕೆ ಮನ್ನಣೆ ನೀಡದೆ ನಿರ್ಲಕ್ಷ್ಯ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಕಾನ್ಫಿಡೆಂಟ್​ ಗ್ರೂಪ್​ ವಶಪಡಿಸಿಕೊಂಡಿದ್ದ 47.25 ಎಕರೆ ಜಮೀನನ್ನು ಮತ್ತೆ ಸರ್ಕಾರವು ತನ್ನ ವಶಕ್ಕೆ ಪಡೆಯಲು ರಾಜ್ಯ ಹೈಕೋರ್ಟ್​ ಆದೇಶ ಮಾಡಿರುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.


ಜಿಲ್ಲಾಧಿಕಾರಿಗಳಾಗಿದ್ದ ಡಿ.ಕೆ.ರವಿ ಅವರು 2014ರ ಅಕ್ಟೋಬರ್​ 10ರಂದು ಆದೇಶ ಮಾಡಿ, ವಗ್ಗಯ್ಯನದಿನ್ನೆ ಗ್ರಾಮದ ಸರ್ವೇ ನಂ.44ರಲ್ಲಿ 17.20 ಎಕರೆ ಖರಾಬುಗುಟ್ಟೆ ಹಾಗೂ ಹುದುಕುಳದ ಸರ್ವೇ ನಂ. 253ರಲ್ಲಿ 31.05 ಎಕರೆ ಸರ್ಕಾರಿ ಖರಾಬು ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಪರಿಶೀಲಿಸಿ ಸರ್ಕಾರದ ವಶಕ್ಕೆ ನೀಡಲು ಆದೇಶಿಸಿದ್ದರು. ನಂತರ ಕಾನ್ಫಿಡೆಂಟ್​ ಗ್ರೂಪ್​ನವರು ತಡೆಯಾಜ್ಞೆ ತಂದಿದ್ದರು. ನಂತರ ಎರಡೂ ಸರ್ವೆ ನಂ. ಕಾಲಂನಲ್ಲಿ ಹೈಕೋರ್ಟಿನ ತಡೆಯಾಜ್ಞೆ ನಮೂದು ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.


ಕಾನ್ಪಿಡೆಂಟ್​ ಗ್ರೂಪ್​ನವರು 47.25 ಎಕರೆ ಜಮೀನು ಕಬಳಿಸಲು ಮುಖ್ಯ ಪಾತ್ರವಹಿಸಿದ್ದ ಪ್ರಭಾವಿಯೊಬ್ಬರು ಹೈಕೋರ್ಟಿನಲ್ಲಿ ಜಿಲ್ಲಾಧಿಕಾರಿ ಡಿ.ಕೆ.ರವಿ ನೀಡಿದ್ದ ಆದೇಶ ರದ್ದಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿ ಸರ್ಕಾರಕ್ಕೆ ಮೋಸ ಮಾಡಲು ಹೊರಟಿದ್ದಾರೆ. 7 ವರ್ಷಗಳಿಂದ ಈ ಕೇಸಿನ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದೇ ಇದ್ದುದರಿಂದ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ರಾಜ್ಯ ಹೈಕೋರ್ಟ್​ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಇವರ ಅರ್ಜಿಯನ್ನು ಜೂ.14 ರಂದು ರದ್ದುಪಡಿಸಿರುವುದರಿಂದ ವಿವಾದಿತ ಜಮೀನನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ಕೇಸಿನ ಬಗ್ಗೆ ಸಂಸದ ಎಸ್​.ಮುನಿಸ್ವಾಮಿ ಹಲವಾರು ಬಾರಿ ಆರೋಪಗಳನ್ನು ಮಾಡಿದ್ದಾರೆಯೇ ಹೊರತು ಅವರು ಮಾಡಿದ್ದ ಚಾಲೆಂಜ್​ ಪ್ರಸ್ತುತ ಕಣ್ಮರೆಯಾಗಿವೆ ಎಂದು ಲೇವಡಿ ಮಾಡಿದರು.
ಜಿಲ್ಲಾ ರೈತ ಸಂದ ಮುಖಂಡರಾದ ಕೂಟೇರಿ ನಾಗರಾಜ್​, ಮುನಿಯಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net