

ಬೀರೂರು: ಪಟ್ಟಣ ವ್ಯಾಪ್ತಿಯಲ್ಲಿನ ಬಹಳಷ್ಟು ಖಾಲಿ ನಿವೇಶನಗಳಲ್ಲಿ ಸ್ವಚ್ಚತೆಗಳಿಲ್ಲದೆ ವಿಷ ಜಂತುಗಳು ಅವಾಸ ಸ್ಥಾನವಾಗಿದೆ. ಇದರಿಂದ ನಿವೇಶನದ ಅಕ್ಕ ಪಕ್ಕದ ಮನೆಗಳ ನಿವಾಸಿಗಳು ಜೀವ ಭಯದಲ್ಲಿ ವಾಸಿಸುವಂತಾಗಿದೆ.
ಬೀರೂರು 25 ಸಾವಿರ ಜನಸಂಖ್ಯೆಗಳನ್ನು ಹೊಂದಿರುವ ತಾಲೂಕಿನ ದೊಡ್ಡ ಹೋಬಳಿ ಕೇಂದ್ರ. ಇಲ್ಲಿ 8 ಸಾವಿರಗಳಷ್ಟು ಪುರಸಭೆ ಅಧಿಕೃತ ನಿವೇಶನಗಳಿದ್ದು, ಅವುಗಳು ಪಟ್ಟಣದಾದ್ಯಂತ ಹಂಚಿ ಹೋಗಿವೆ. ಖಾಲಿ ನಿವೇಶನದ ಮಾಲೀಕರು ಖಾತೆಗೆ ಪುರಸಭೆಯಲ್ಲಿ ಕಂದಾಯ ಪಾವತಿ ಮಾಡುವುದನ್ನು ಬಿಟ್ಟರೆ, ನಿವೇಶನದಲ್ಲಿ ಏನಾಗಿದೆ ಎಂದು ತಿರುಗಿಯೂ ಕೂಡ ನೋಡಿಲ್ಲ.
ಡಿ.ಎಚ್.ರುದ್ರಪ್ಪ ಬಡಾವಣೆ, ಹೊಸಳಮ್ಮ ಬಡಾವಣೆ, ಇಂದಿರಾನಗರ, ಭಾಗವತ್‌ನಗರ, ಹಾಲಪ್ಪ ಬಡಾವಣೆ, ರಾಜಾಜಿನಗರ, ವಿವೇಕನಂದ ಬಡಾವಣೆ ಸೇರಿದಂತೆ ಪಟ್ಟಣ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವು ಮಾಡದಿರುವುದರಿಂದ ಆ ನಿವೇಶನಗಳಲ್ಲಿ ಮುಳ್ಳಿನ ಗಿಡಗಂಟೆಗಳು ಪೊದೆಗಳಂತೆ ಬೆಳೆದು ವಿಷ ಜಂತುಗಳು ಅವಾಸ ಸ್ಥಾನವಾಗಿ ಮಾರ್ಪಟಿವೆ. ಇದರಿಂದ ನಿವೇಶನ ಅಕ್ಕ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ಹಾವು, ಚೇಳು, ವಿಷಜಂತುಗಳು ಮನೆಯೊಳಗೆ ಬಂದು ಸೇರಿಕೊಳ್ಳುವ ಭಯ ಮೂಡಿಸುತ್ತಿದೆ.
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಡಬೇಕು ಇಲ್ಲವಾದಲ್ಲಿ ಪುರಸಭೆ ಆ ಗಿಡಗಂಟಿಗಳನ್ನು ತೆರವು ಮಾಡಿಸಿ ಅದರ ಸಂಪೂರ್ಣ ಖರ್ಚನ್ನು ಆ ನಿವೇಶನದ ತೆರಿಗೆಗೆ ಸೇರ್ಪಡೆ ಮಾಡಿ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂಬ ಪುರಸಭೆ ಆದೇಶ ಕೇವಲ ಆದೇಶವಾಗಿ ಉಳಿದಿದೆ. ಅಲ್ಲದೇಇಲ್ಲಿಯವರೆಗೂ ಯಾವುದೇ ಒಂದು ಖಾಲಿ ನಿವೇಶನವನ್ನು ಸ್ವಚ್ಛಗೊಳಿಸಿರುವ ಉದಾಹರಣೆಗಳಿಲ್ಲ.
ಪಟ್ಟಣದಲ್ಲಿ ಇರುವ ಖಾಲಿ ನಿವೇಶನಗಳ ಮಾಹಿತಿ ಪಡೆದು ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ನಿವೇಶನಗಳನ್ನು ಸ್ವಚ್ಛ ಮಾಡಿಸಬೇಕು. ಅದಕ್ಕೆ ಪುರಸಭೆ ವ್ಯಯಿಸುವ ಹಣವನ್ನು ಮಾಲೀಕರಿಂದ ಪಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.