ಹುಬ್ಬಳ್ಳಿ: ಡೆಂಘಿ ವಿರುದ್ಧ ಸಮರ ಸಾರಿರುವ ಮಹಾನಗರ ಪಾಲಿಕೆ ಎಲ್ಲೆಡೆ ಸ್ವಚ್ಚತೆಗೆ ಆದ್ಯತೆ ನೀಡಿದೆ. ಈ ಮಧ್ಯೆ ಅವಳಿನಗರದ ಹಲವು ಕಡೆಗಳಲ್ಲಿ ಖಾಲಿ ಸೈಟ್ ಗಳು ಕಸದ ಕೊಂಪೆಯಾಗಿರುವುದು ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಖಾಲಿ ನಿವೇಶನಗಳ ಸ್ವಚ್ಛತೆಗೂ ಮಹಾನಗರ ಪಾಲಿಕೆ ಯೋಜನೆ ರೂಪಿಸಿದ್ದು, ತಕ್ಷಣದಿಂದ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬಡಾವಣೆಗಳು ಬೆಳೆದರೂ ಅನೇಕರು ತಮ್ಮ ನಿವೇಶನಗಳನ್ನು ಖಾಲಿ ಬಿಟ್ಟಿದ್ದಾರೆ. ಕನಿಷ್ಠ ಪಕ್ಷ ಸ್ವಚ್ಛ ಮಾಡಿಟ್ಟುಕೊಂಡಿಲ್ಲ. ಇದರಿಂದ ಅಕ್ಕಪಕ್ಕದ ವಾತಾವರಣ ಹದಗೆಡುತ್ತಿದೆ.
ಅಕ್ಕಪಕ್ಕದವರು ಕಸ ಚೆಲ್ಲುವುದು, ಖಾಲಿ ಬಾಟಲಿ, ಟೈರ್, ತೆಂಗಿನ ಚಿಪು$್ಪ ಇತ್ಯಾದಿಗಳನ್ನು ಎಸೆಯಲಾಗುತ್ತಿದೆ. ಇದರಿಂದ ಅಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿವೆ.
ಇದರಿಂದ ರೋಗಗಳು ಹೆಚ್ಚಾಗುವ ಆತಂಕ ಎದುರಾಗಿದೆ.
ಸಾಕಷ್ಟು ಬಾರಿ ಖಾಲಿ ನಿವೇಶನಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿಲ್ಲ. ಬೇಲಿ ಹಾಕಿ ಯಾರೂ ಕಸ ಚೆಲ್ಲದಂತೆ ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಮಹಾನಗರ ಪಾಲಿಕೆಯಿಂದಲೇ ಸ್ವಚ್ಛತೆ ಕೈಗೊಂಡು ಪಿಐಡಿ ನಂಬರ್ ಮೇಲೆ ಬೋಜಾ ಕೂಡ್ರಿಸಲು ಮುಂದಾಗಿದೆ.
ಅವಳಿನಗರದಲ್ಲಿ ಸಾವಿರಾರು ಖಾಲಿ ನಿವೇಶನಗಳು ಇದ್ದು, ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಕಾರಣ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಹಾಗಾಗಿ ಅವುಗಳ ಸ್ವಚ್ಛತೆಗೆ ಯೋಜನೆ ರೂಪಿಸಲಾಗಿದೆ.
ಪಾಲಿಕೆಯಿಂದ ಕ್ಲಿನಿಂಗ್ ಮಾಡಿ ಅದರ ವೆಚ್ಚ ಹಾಗೂ ದಂಡವನ್ನು ಬೋಜಾ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.