

ಬೇಲೂರು : ಪಟ್ಟಣದ ಹೃದಯ ಭಾಗದಲ್ಲಿರುವ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಅನಧಿಕೃತವಾಗಿ ಹಾಕಿರುವ ಗುಡಿಸಲು ತೆರವುಗೊಳಿಸಿ, ಅವರಿಗೆ ಶೀಘ್ರವೇ ಬದಲಿ ನಿವೇಶನ ನೀಡಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಹೆಚ್.ಕೆ.ಸುರೇಶ್ ಹೇಳಿದರು.
ಜ್ಯೂನಿಯರ್ ಕಾಲೇಜು ವಿದ್ಯಾರ್ಥಿ ಕಲಾ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಮುಂಭಾಗ ಇಷ್ಟು ವಿಶಾಲವಾದ ಮೈದಾನವಿದ್ದು, ಈ ಮೈದಾನ ಉಳಿಸಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಕಾಂಪೌಂಡ್ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ಕಾಲೇಜು ಹಿಂಭಾಗದಲ್ಲಿ ಗುಡಿಸಲು ವಾಸಿಗಳನ್ನು ವಿಶ್ವಾಸಕ್ಕೆ ಪಡೆದು ಅವರಿಗೆ ಬದಲಿ ನಿವೇಶನ ಕೊಡಿಸಲು ಅವಕಾಶ ಕಲ್ಪಿಸಿ ಹಕ್ಕುಪತ್ರ ವಿತರಿಸಲಾಗುವುದು. ಅಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ನಿರ್ಮಿಸಲಾಗುವುದು. ಅದೇ ರೀತಿ ವಿದ್ಯಾರ್ಥಿಗಳು ಶೇ. 100 ರಷ್ಟು ಫಲಿತಾಂಶ ತರುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಬೇಕು. ಹಾಗೂ ವಿದ್ಯಾರ್ಥಿಗಳು ಸಹ ವಿದ್ಯಾಭ್ಯಾಸಕ್ಕೆ ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಎಚ್.ಕೆ.ಸುರೇಶ್ ಅವರು ಶಾಸಕರಾದ ಸಂದರ್ಭ ಜ್ಯೂನಿಯರ್ ಕಾಲೇಜು ಮೈದಾನ, ಸಂತೆ ಮೈದಾನ ಮತ್ತು ಮುಖ್ಯರಸ್ತೆಯ ವಾಹನ ದಟ್ಟಣೆಗೆ ಪರಿಹಾರ ಹುಡುಕುವಂತೆ ನಾನು ಸದಸ್ಯನಾಗಿದ್ದಾಗ ತಿಳಿಸಿದ್ದೆವು. ಆದರೆ ಇಂದು ನಾನೇ ಪುರಸಭೆ ಅಧ್ಯಕ್ಷನಾಗಿದ್ದು, ಶಾಸಕರ ಸಹಮತದೊಂದಿಗೆ ಕಾಲೇಜು ಹಿಂಭಾಗದ ಅನಧಿಕೃತ ಗುಡಿಸಲು ತೆರವುಗೊಳಿಸಿ ಅವರಿಗೆ ಬದಲಿ ನಿವೇಶನ ನೀಡುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಲೋಕೇಗೌಡ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಂಗನಾಥ್, ಡಾ.ಚೇತನ್, ಪ್ರಾಂಶುಪಾಲ ಹರೀಶ್, ಉಪನ್ಯಾಸಕರಾದ ಲಕ್ಷ್ಮೀನಾರಾಯಣ, ಸರ್ವಮಂಗಳಾ, ವೇದಾವತಿ, ರಂಗಸ್ವಾಮಿ, ಶ್ರೀನಿಧಿ, ಮೋಹನ್, ಕಾವ್ಯಾಶ್ರೀ, ಶೃತಿ, ಚಂದ್ರಕಲಾ, ನಾಗೇಶ್, ಸ್ವಾತಿ, ಚಂದ್ರಶೇಖರ, ಸವಿತಾ ಇತರರು ಇದ್ದರು.