

ಮೈಸೂರು: ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿರುವ ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.
ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಕರೆದಿದ್ದ ಮೈವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ತಾತ್ಕಾಲಿಕ ಅಧ್ಯಾಪಕೇತರ ಉದ್ಯೋಗಿಗಳನ್ನು ಸೇವೆಯಲ್ಲಿ ಮುಂದುವರಿಸುವ ಕುರಿತು ಮತ್ತು ಈ ಸಿಬ್ಬಂದಿ ಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಸಂಬಂಧ ಪರಾಮರ್ಶಿಸಿ ವರದಿ ಸಲ್ಲಿಸಲು ವಿಶ್ರಾಂತ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆಯಲ್ಲಿ ಸಮಿತಿ ವರದಿ ನೀಡಿದ್ದು, ಇದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಕೆಲ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗಿಂತ ಬೋಧಕೇತರ ಸಿಬ್ಬಂದಿ ಸಂಖ್ಯೆಯೇ ಅಧಿಕವಾಗಿದ್ದು, ಈ ರೀತಿ ಅನಗತ್ಯ ಸಿಬ್ಬಂದಿ ಏಕೆ ನೇಮಿಸಿಕೊಳ್ಳಲಾಗಿದೆ? ಇದು ಆರ್ಥಿಕ ಹೊರೆ ಅಲ್ವೇ? ಎಂದು ವಿಧಾನಪರಿಷತ್ ಸಿ.ಎನ್.ಮಂಜೇಗೌಡ ಆಕ್ಷೇಪಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಕುಲಸಚಿವೆ ವಿ.ಆರ್.ಶೈಲಜಾ, 2020ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿ ನಿಯೋಜಿಸಿಕೊಳ್ಳಲಾಗಿದೆ. ಆದರೆ, 2 ವರ್ಷದಲ್ಲಿ ನೇಮಕಾತಿ ಮಾಡಿಕೊಂಡಿಲ್ಲ. ಸದ್ಯ 1,136 ಬೋಧಕೇತರಿದ್ದಾರೆ. ಇವರಿಗೆ ವೇತನ ನೀಡಲು ತಿಂಗಳಿಗೆ 2.30 ಕೋಟಿ ರೂ., ವರ್ಷಕ್ಕೆ 25 ಕೋಟಿ ರೂ. ವ್ಯಯಿಸಲಾಗುತ್ತಿದ್ದು, ವಿವಿ ಆಂತರಿಕ ಸಂಪನ್ಮೂಲದಿಂದ ಇದನ್ನು ಕೊಡಲಾಗುತ್ತಿದೆ ಎಂದು ತಿಳಿಸಿದರು.
1,340 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಶೇ.70ರಷ್ಟು ಹುದ್ದೆಗಳು ಖಾಲಿ ಇದೆ. 400 ಕಾಯಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾತ್ಕಾಲಿಕ ಮತ್ತು ಕಾಯಂ ಸಿಬ್ಬಂದಿ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಿತ್ತು. ಇತಿಮಿತಿಯಲ್ಲಿ ಈ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಿತ್ತು. ಅದು ಆಗಿಲ್ಲ. ಇದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಮತ್ತು ಪರಿಸರ ಅಧ್ಯಯನ ಪತ್ರಿಕೆ ಅಳವಡಿಕೆ ಮಾಡಿಕೊಳ್ಳದ 9 ಕಾಲೇಜುಗಳಿಗೆ ದಂಡ ಹಾಕಲು ಸಭೆ ತೀರ್ಮಾನಿಸಿತು.
ಕೋವಿಡ್ ಕಾರಣದಿಂದ ತಮ್ಮ ದೇಶಕ್ಕೆ ತೆರಳಿರುವ ಚೀನಾದ ವಿದ್ಯಾರ್ಥಿಗಳಿಗಾಗಿ ಎಂ.ಎಸ್(ಐಟಿ), ಎಂ.ಎಸ್(ಎಸ್‌ಇ) ಪದವಿ ಕೋರ್ಸ್‌ಗಳ 3, 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆನ್‌ಲೈನ್ ಮುಖಾಂತರ ನಡೆಸಲು ಅನುಮತಿ ನೀಡಲಾಯಿತು. ಮೈವಿವಿ ಸ್ಕೂಲ್ ಆಫ್ ಇಂಜಿನಿಯರಿಂಗ್ ನಿಕಾಯದ ಡೀನ್ ಆಗಿ ಪ್ರೊ.ಎಸ್.ಜೆ.ಮಂಜುನಾಥ್ ನೇಮಕಕ್ಕೆ ಒಪ್ಪಿಗೆ ನೀಡಲಾಯಿತು.
ಕನ್ನಡ ವಿಷಯದಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಮ್ ದತ್ತಿ, ಅಣುಜೀವಶಾಸ್ತ್ರ ವಿಷಯದಲ್ಲಿ ಪ್ರೊ.ಗೋಪಾಲ ಮರಾಠೆ ಚಿನ್ನದ ಪದಕ, ಇಂಗ್ಲಿಷ್ ವಿಷಯದಲ್ಲಿ ಪ್ರೊ.ದೊಡ್ಡೇರಿ ಅಶ್ವತ್ಥನಾರಾಯಣರಾವ್ ಶಂಕರ್ ಚಿನ್ನದ ಪದಕ, ಕಾನೂನು ವಿಷಯದಲ್ಲಿ ಪ್ರೊ.ಸಿ.ಬಸವರಾಜ್ ಚಿನ್ನದ ಪದಕ ಸ್ಥಾಪನೆಗೆ ಸಮ್ಮತಿ ನೀಡಲಾಯಿತು.
ಮಾನಸಗಂಗೋತ್ರಿಯಲ್ಲಿ ಬಿಯರ್ ಬಾಟಲಿ, ಸಿಗರೇಟ್, ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿದ್ದಿವೆ. ಅಶುಚಿತ್ಚ ತಾಂಡವವಾಡುತ್ತಿದೆ. ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಎಂಎಲ್‌ಸಿ ಸಿ.ಎನ್.ಮಂಜೇಗೌಡ ಕಿಡಿಕಾರಿದರು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಕುಲಪತಿ ಭರವಸೆ ನೀಡಿದರು.