

ಡಿಸಿ ವೆಂಕಟೇಶ್ ಅವರು ಶನಿವಾರ ವಿ.ವಿ. ಸಾಗರ ಜಲಾಶಯ ಮತ್ತು ಕೋಡಿ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಜಲಾಶಯ ಭರ್ತಿಯಾಗಿರುವ ಕಾರಣ ಜಲ ವೈಭವ ಕಣ್ತುಂಬಿಕೊಳ್ಳಲು ಜನದಟ್ಟಣೆ ಹೆಚ್ಚಾಗಿದೆ. ಕೋಡಿ ಬಿದ್ದಿರುವ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಬೇಕು. ವೇದಾವತಿ ನದಿ ಪಾತ್ರದಲ್ಲಿ ಜನ ಮತ್ತು ಜಾನುವಾರುಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.
ಅಲ್ಲದೆ, ಕೋಡಿ ಕೆಳಭಾಗದ ಸ್ಥಳದಲ್ಲಿ ಜನರು ನೀರಿಗೆ ಇಳಿಯದಂತೆ ಎಚ್ಚರ ವಹಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿಸಿ ಅವರು ಈ ಸಂದರ್ಭದಲ್ಲಿ ಜಲಾಶಯದ ಗೇಟ್ ನಿರ್ವಹಣೆ, ಒಳಹರಿವು, ನೀರಿನ ಸಂಗ್ರಹ ಸಾಮರ್ಥ್ಯ, ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು.
ಈ ವೇಳೆ ತಹಸೀಲ್ದಾರ್ ಎಂ. ಸಿದ್ದೇಶ್, ನೀರಾವರಿ ಇಲಾಖೆ ಅಧಿಕಾರಿಗಳಾದ ಚಂದ್ರಪ್ಪ, ಜಯಕುಮಾರ್, ನಿಜ್ಜೇಗೌಡ, ಕಂದಾಯ ಅಧಿಕಾರಿ ರಾಜಗೋಪಾಲ್, ದೇವರಾಜ್, ಚಂದ್ರಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.