ವಾಡಿ-ಗದಗ ರೈಲ್ವೆ ಮಾರ್ಗ 2-3 ವರ್ಷದಲ್ಲಿ ಪೂರ್ಣ

0106Klb02
Published on

ಕಲಬುರಗಿ: ಮುಂಬೈ ಕರ್ನಾಟಕ-ಕಲ್ಯಾಣ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ 257 ಕಿ.ಮೀ. ಉದ್ದದ ವಾಡಿ-ಗದಗ ರೈಲ್ವೆ ಸಿಂಗಲ್ ಹಳಿ ಕಾಮಗಾರಿ 2-3 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರದ ರೈಲ್ವೆ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ರವಿವಾರ ಕಲಬುರಗಿ ರೈಲ್ವೆ ನಿಲ್ದಾಣ ವೀಕ್ಷಣೆ ನಂತರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2,841 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ.50-50 ಸಹಭಾಗಿತ್ವದಲ್ಲಿ ತೆಗೆದುಕೊಳ್ಳಲಾಗಿದೆ. ಈಗಾಗಲೆ ತಳಕಲ್-ಕುಷ್ಠಗಿ ಮಾರ್ಗದ 56 ಕಿ.ಮೀ. ಪೂರ್ಣಗೊಂಡಿದ್ದರಿಂದ ಇತ್ತೀಚಿಗಷ್ಟೆ ರೈಲ್ವೆ ಸೇವೆಗೆ ಚಾಲನೆ ನೀಡಲಾಗಿದೆ. ಮಾರ್ಗದ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿಗೆ ವೇಗ ನೀಡಿ 2-3 ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಪ್ರಸ್ತುತ ಬೆಂಗಳೂರಿನಿಂದ ಕಲಬುರಗಿ-ಬೀದರ ಬರಬೇಕಾದರೆ ಧರ್ಮಾವರಂ, ಗುಂತಕಲ್ ಮಾರ್ಗವಾಗಿ ಬರಬೇಕು. ವಾಡಿ-ಗದಗ ರೈಲ್ವೆ ಯೋಜನೆ ಸಾಕಾರಗೊಂಡಲ್ಲಿ ಪ್ರಯಾಣಿಕರಿಗೆ ಈ ಮಾರ್ಗದಲ್ಲಿ ಎರಡು ಗಂಟೆ ಸಮಯ ಉಳಿತಾಯವಾಗಲಿದೆ ಎಂದರು.

ಗಿಣಗೇರಾ-ರಾಯಚೂರು 165 ಕಿ.ಮೀ, 2,842 ಕೋಟಿ ರೂ. ವೆಚ್ಚದ ಸಿಂಧನೂರು-ರಾಯಚೂರು 81 ಕಿ.ಮೀ, 84 ಕಿ.ಮೀ. ಉದ್ದದ ಗಿಣಗೇರಾ-ಸಿಂಧನೂರು, 2010-11ರಲ್ಲಿ ಮಂಜೂರಾದ ಬಾಗಲಕೋಟೆ-ಕುಡಚಿ ರೈಲು ಮಾರ್ಗ 1,938 ಕೋಟಿ ರೂ. ಮೊತ್ತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಲೋಕಾಪೂರ-ಯಾದವಾಡ-ಜಮಖಂಡಿ ಯೋಜನೆ 2027ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಆಲಮಟ್ಟಿ-ಯಾದಗಿರಿ (ವಾಯಾ ಜೇವರ್ಗಿ) 162 ಕಿ.ಮೀ. ಮತ್ತು ಭದ್ರಾವತಿ-ಚಿಕ್ಕಜಾಜೂರು 73 ಕಿ.ಮೀ ಉದ್ದದ ರೈಲ್ವೆ ಹಳಿ ನಿರ್ಮಿಸಲು ಸರ್ವೇ ಕಾರ್ಯ ಮುಗಿದಿದ್ದು, ಡಿ.ಪಿ.ಆರ್. ತಯಾರಿಸಲಾಗುತ್ತಿದೆ. ಇದಲ್ಲದೆ ಹೋಟಗಿ-ಕುಡಗಿ-ಗದಗ ಡಬ್ಲಿಂಗ್ 284 ಕಿ.ಮೀ. ಕಾಮಗಾರಿ 1,900 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. 2,300 ಕೋಟಿ ರೂ. ವೆಚ್ಚದ ಬೀದರ-ನಾಂದೇಡ್ 155 ಕಿ.ಮೀ., 4,500 ಕೋಟಿ ರೂ. ವೆಚ್ಚದ ಸಿಕಿಂದ್ರಾಬಾದ-ವಾಡಿ 3ನೇ ಮತ್ತು 4ನೇ ಹಂತದ 183 ಕಿ.ಮೀ. ಉದ್ದದ ಡಬ್ಲಿಂಗ್ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ 2025-26ನೇ ಸಾಲಿನಲ್ಲಿ ಕರ್ನಾಟಕದ 11 ಯೋಜನೆಗಳಿಗೆ 39,000 ಕೋಟಿ ರೂ. ಅನುದಾನ ವ್ಯಯ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರ ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದರಿಂದ ಈ ಎಲ್ಲಾ ಕೆಲಸಗಳು 2027ರ ಅಂತ್ಯಕ್ಕೆ ಪೂರ್ಣಗೊಂಡು ರೈಲ್ವೆ ಸೇವೆ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದರು.

ಪ್ರಸ್ತುತ ವರ್ಷ 2.65 ಲಕ್ಷ ಕೋಟಿ ರೂ. ರೈಲ್ವೆ ಇಲಾಖೆಗೆ ಹಂಚಿಕೆ ಮಾಡಿದೆ. ರಾಜ್ಯದ 61 ರೈಲ್ವೆ ನಿಲ್ದಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಮೀಸಲಿರಿಸಿದೆ. ಇತ್ತೀಚೆಗಷ್ಟೆ ಅಮೃತ ಭಾರತ ಯೋಜನೆಯಡಿ ದೇಶದಾದ್ಯಂತ 103 ರೈಲ್ವೆ ನಿಲ್ದಾಣಗಳ ಅಧುನಿಕರಣಗೊಳಿಸಿ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದು, ಅದರಲ್ಲಿ 5 ನಿಲ್ದಾಣ ರಾಜ್ಯಕ್ಕೆ ಸೇರಿವೆ ಎಂದ ಅವರು, ಹಳೇ ರೈಲ್ವೆ ಭೋಗಿಗಳನ್ನು ಬದಲಾಯಿಸಿ ಹೊಸದಾಗಿ ಭೋಗಿ ಅಳವಡಿಸಲು 10 ಸಾವಿರ ಸ್ಲೀಪರ್, ಪ್ಯಾಸೆಂಜರ್ ಭೋಗಿ ಸಿದ್ಧವಾಗಿವೆ. ಹಂತ-ಹಂತವಾಗಿ ಅಳವಡಿಸುವ ಕಾರ್ಯ ನಡೆಯಲಿದೆ ಎಂದರು.

ಕಲಬುರಗಿ-ಬೆಂಗಳೂರು ನಡುವೆ ಪ್ರಯಾಣಿಕರ ಓಡಾಟ ಹೆಚ್ಚಿರುವುದರಿಂದ ಟಿಕೆಟ್ ಬುಕ್ ಮಾಡಬೇಕಾದರೆ ಹೋಟಗಿ ನಿಲ್ದಾಣ ಬೋರ್ಡಿಂಗ್ ಎಂದು ಆಯ್ದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಕಲಬುರಗಿ ವಿಭಾಗೀಯ ಕೇಂದ್ರವಾಗಿರುವುದರಿಂದ ಟಿಕೆಟ್ ಬುಕ್ ಮಾಡಲು ಸೀಟ್ ರಿಸರ್ವೇಷನ್ ಕೋಟಾ ಇಲ್ಲಿ ಹೆಚ್ಚಿಸಬೇಕೆಂದು ಪತ್ರಕರ್ತರ ಪ್ರಶ್ನೆಗೆ ಕೂಡಲೆ ಡಿ.ಆರ್.ಎಂ. ಮತ್ತು ಕಮರ್ಷಿಯಲ್ ಮ್ಯಾನೇಜರ್ ಇಬ್ಬರು ಪರಸ್ಪರ ಚರ್ಚೆ ಮಾಡಿ ಕೋಟಾ ಹೆಚ್ಚಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net