

ಮೈಸೂರು: ಮಾತೃಭಾಷೆಯಲ್ಲಿ ಸರ್ಕಾರ ಪರೀಕ್ಷೆ ನಡೆಸಬೇಕು ಎಂಬ ಧ್ವನಿ ಎತ್ತುವ ಮೂಲಕ ವಿ.ಕೃ.ಗೋಕಾಕ್ ಅವರು ರಾಜ್ಯಾದ್ಯಂತ ಪ್ರಬಲವಾದ ಗೋಕಾಕ್ ಚಳವಳಿಗೆ ಕಾರಣಕರ್ತರಾಗಿದ್ದರು ಎಂದು ಹಿರಿಯ ಪತ್ರಕರ್ತ ಗೌರಿಸತ್ಯ ಬಣ್ಣಿಸಿದರು.
ಮೈಸೂರು ಕನ್ನಡ ವೇದಿಕೆಯಿಂದ ನಗರದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಕನ್ನಡ ನಿತ್ಯೋತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿ. ಕೃ. ಗೋಕಾಕ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಕೆಲಸದ ಕೆಲ ಪರೀಕ್ಷೆಗಳು ಸಂಸ್ಕೃತ ಹಾಗೂ ಆಂಗ್ಲಭಾಷೆಯಲ್ಲಿ ನಡೆಯುತ್ತಿದ್ದವು. ಇದರಿಂದ ರಾಜ್ಯದ ಅಭ್ಯರ್ಥಿಗಳು ಹೆಚ್ಚು ಉತ್ತೀರ್ಣರಾಗದೆ ಸರ್ಕಾರಿ ಉದ್ಯೋಗ ಸರಿಯಾಗಿ ಸಿಗುತ್ತಿರಲಿಲ್ಲ. ಹೀಗಾಗಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಬೇಕು ಎನ್ನುವ ಧ್ವನಿಯನ್ನು ಆಂಗ್ಲ ಪ್ರಾಧ್ಯಾಪಕರಾಗಿದ್ದ ವಿ.ಕೃ.ಗೋಕಾಕ್ ಎತ್ತಿದ್ದರು ಎಂದು ತಿಳಿಸಿದರು.
ಈ ವಿಷಯವನ್ನು ಕನ್ನಡಪರ ಸಂಘಟನೆಗಳಿಗೆ ತಿಳಿಸಿ ಹೋರಾಟ ಮಾಡಲು ಹುರಿದುಂಬಿಸಿದರು. ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡಿದರು. ಆದರೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರು ಸರಿಯಾದ ಬೆಂಬಲ ನೀಡದೆ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಪರ ನಿಂತಿದ್ದರಿಂದ ಹೋರಾಟದಲ್ಲಿ ವೈಮನಸ್ಸು ಆರಂಭಗೊಂಡು ಚಳವಳಿ ದಾರಿ ತಪ್ಪಿತ್ತು ಎಂದರು.
ಈ ಸಮಯದಲ್ಲಿ ಅಂದಿನ ಮದ್ರಾಸ್‌ನಲ್ಲಿದ್ದ ವರನಟ ಡಾ.ರಾಜ್‌ಕುಮಾರ್ ಅವರನ್ನು ಭೇಟಿಯಾಗಿ ಕನ್ನಡಿಗರಿಗೆ ಉದ್ಯೋಗದಲ್ಲಿ ಅಗುತ್ತಿದ್ದ ಅನ್ಯಾಯವನ್ನು ತಿಳಿಸಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಮಾಡಿದರು. ಡಾ.ರಾಜ್‌ಕುಮಾರ್ ಹೋರಾಟಕ್ಕೆ ಇಳಿದ ಬಳಿಕ ಹೋರಾಟಕ್ಕೆ ದೊಡ್ಡ ಶಕ್ತಿ ಬಂದಿತ್ತಲ್ಲದೆ, ಸರ್ಕಾರಕ್ಕೂ ನಡುಕು ಉಂಟಾಗಿ ಮಾತೃಭಾಷೆಗೆ ಆದ್ಯತೆ ನೀಡುವ ತೀರ್ಮಾನ ಕೈಗೊಂಡಿತು. ಗೋಕಾಕ್ ಅವರು ಆರಂಭಿಸಿದ ಹೋರಾಟ ಯಶಸ್ಸು ಕಂಡು ಈಗ ಇತಿಹಾಸ ಪುಟ ಸೇರಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕನ್ನಡ, ನೆಲ, ಜಲ ಸೇರಿದಂತೆ ಇನ್ನಿತರ ಕನ್ನಡ ಪರ ಹೋರಾಟ ನಡೆಸಿದ, ಕನ್ನಡದ ಘನತೆಯನ್ನು ಎತ್ತಿ ಹಿಡಿದ ಸಾಹಿತಿಗಳ ಕುರಿತು ಇಂದಿನ ಪೀಳಿಗೆಗೆ ಮಾಹಿತಿಯೇ ಇಲ್ಲವಾಗಿದೆ ಎಂದು ವಿಷಾದಿಸಿದರು.
ಯುವ ಜನಾಂಗಕ್ಕೆ ನಮ್ಮ ಕಲೆ, ಸಂಸ್ಕೃತಿ, ಪರಂಪರೆ, ಸಾಹಿತಿಗಳ ಕುರಿತು ಮಾಹಿತಿ ನೀಡಲು ಶಾಲಾ, ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ನಡೆಸಬೇಕು. ನಮ್ಮ ಹಿರಿಯರು ನಾಡು, ನುಡಿ, ನೆಲ, ಜಲಕ್ಕಾಗಿ ಮಾಡಿದ ಹೋರಾಟ ಕುರಿತು ತಿಳಿಸಿಕೊಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ. ರಘುರಾಮ್ ವಾಜಪೇಯಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಚಳವಳಿ ನಂತರ ಮತ್ತೊಂದು ದೊಡ್ಡ ಮಟ್ಟದ ಚಳವಳಿ ಎಂದರೆ ಅದು ಗೋಕಾಕ್ ಚಳವಳಿಯಾಗಿದೆ. ಆರಂಭದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಭಾಗವಹಿಸುತ್ತಿದ್ದ ಚಳವಳಿ ಡಾ. ರಾಜ್‌ಕುಮಾರ್ ಬಂದ ನಂತರ ಈ ಹೋರಾಟಕ್ಕೆ ಪುಷ್ಟಿ ಬಂದಂತಾಯಿತು. ಇಂಥ ಮಹನೀಯರನ್ನು ನೆನೆಯುವುದೇ ಸೌಭಾಗ್ಯ. ಈ ಚಳವಳಿ ಭಾಗವಹಿಸಿದ ಹಲವು ಹೋರಾಟಗಾರರು ಅಗಲಿದ್ದಾರೆ. ಕೆಲವರು ಮಾತ್ರ ಇದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ರಾಜ್‌ಕುಮಾರ್ ಸಂಬಂಧಿ ನಾಗೇಶ್ ಗಾಜನೂರು ಮಾತನಾಡಿ, ಹೋರಾಟದ ಬಗ್ಗೆ ತಿಳಿದ ಅಣ್ಣಾವ್ರ ನಾಡು, ನುಡಿ, ಜಲಕ್ಕಾಗಿ ಹೋರಾಟ ಮಾಡಲು ನಾ ಎಂದಿಗೂ ಸಿದ್ಧ ಎಂದು ಹೋರಾಟಕ್ಕೆ ಬಂದಿದ್ದು ನಮ್ಮ ಸೌಭಾಗ್ಯವಾಗಿತ್ತು. ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ನಾನು ಅವರ ಜತೆ ಇದ್ದೆ. ರಾಜ್ಯದಲ್ಲಿ ಗಲಭೆ ನಡೆಯುತ್ತಿದೆ ಎಂದಾಗ ಮರುಗಿ ಶಾಂತಿ ಕಾಪಾಡುವಂತೆ ಕೋರಿದ್ದರು. ಒಂದು ಹಂತದಲ್ಲಿ ನನ್ನನ್ನು ಕೊಂದು ಬೇರೆಯವರನ್ನು ಬಿಟ್ಟು ಬಿಡು ಎಂದು ಹೇಳಿದ್ದರು ಎಂದು ಹಳೇ ಘಟನೆಯನ್ನು ನೆನಪು ಮಾಡಿಕೊಂಡರು.
ಹೋರಾಟಗಾರರಾದ ರಾಮೇಗೌಡ, ಮೂಗೂರು ನಂಜುಂಡಸ್ವಾಮಿ, ಮಹದೇವಸ್ವಾಮಿ, ನಾಗೇಶ್, ಹಿರಿಯ ಪತ್ರಕರ್ತ ಗೌರಿಸತ್ಯ, ಸಮಾಜ ಸೇವಕ ಕೆ. ರಘುರಾಮ ವಾಜಪೇಯಿ. ವೈದ್ಯ ಡಾ. ಪ್ರದೀಪ್ ಅವರಿಗೆ ವಿ.ಕೃ.ಗೋಕಾಕ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆ ಅಧ್ಯಕ್ಷ ಎಸ್ ಬಾಲಕೃಷ್ಣ, ವಿವಿಧ ಪದಾಧಿಕಾರಿಗಳಾದ ರವಿ ನಾಲಾ ಬೀದಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಮನೋಹರ್, ಬಾಬು, ಮಾದಪ್ಪ, ಕಾವೇರಮ್ಮ, ಹರೀಶ್ ಕುಮಾರ್ ಇತರರು ಇದ್ದರು.