

ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳೆರಡರಲ್ಲೂ ಅದ್ಭುತ ಸಾಧನೆ ಮಾಡಿ ಜಾಗತಿಕವಾಗಿ ಕನ್ನಡಕ್ಕೆ ಘನತೆ ತಂದುಕೊಟ್ಟ ಕೀರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಕೃ.ಗೋಕಾಕ್ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಒಂಟಿಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತ್ಯ ದಿಗ್ಗಜ ವಿ.ಕೃ.ಗೋಕಾಕರ ಜನ್ಮ ದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೋರಾಟಕ್ಕೂ ಸೈ, ಬರಹಕ್ಕೂ ಸೈ, ಬೋಧನೆಗೂ ಸೈ, ಭಾಷಣಕ್ಕೂ ಸೈ ಎನ್ನುವಂತಿದ್ದ ವಿನಾಯಕ ಕೃಷ್ಣ ಗೋಕಾಕರು ಕನ್ನಡಕ್ಕೆ 5ನೇ ಜ್ಞಾನಪೀಠ ಪ್ರಶಸ್ತಿಯನ್ನು 1996ರಲ್ಲಿ ತಂದುಕೊಟ್ಟರು. ಆ ಮೂಲಕ ಕನ್ನಡದ ಹಿರಿಮೆ, ಗರಿಮೆಯನ್ನು ಮೆರೆಸಿ ತಮ್ಮ ಜೀವಿತಾ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ- ಪ್ರಸಿದ್ಧಿಗಳನ್ನು ಪಡೆದು, ಎಲ್ಲ ರೀತಿಯ ಕೀರ್ತಿ ಕಳಸಗಳಿಂದ ಕನ್ನಡಮ್ಮನ ಮಡಿಲನ್ನು ತುಂಬಿದ್ದಾರೆ ಎಂದು ಬಣ್ಣಿಸಿದರು.
ಡಾ.ರಾಜಕುಮಾರ್, ಡಾ.ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ಕನ್ನಡ ನಾಡಿನ ಉದ್ದಗಲಕ್ಕೂ ನಡೆದ ಗೋಕಾಕ್ ಚಳವಳಿಯನ್ನು ಕನ್ನಡ ನಾಡು ಯಾವತ್ತೂ ಮರೆಯುವಂತೆಯೇ ಇಲ್ಲ. ಕನ್ನಡಿಗರನ್ನು ಬಡಿದೆಬ್ಬಿಸಿದ ಅಂತಹ ಶಕ್ತಿಯುತ ಚಳವಳಿ ಅದು. ಅದಕ್ಕೆ ಪ್ರೇರಕ ಶಕ್ತಿಯೇ ಗೋಕಾಕರು. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಭಾಷಾಭಿಮಾನದ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಕನ್ನಡದ ಕಿಚ್ಚನ್ನು ಹೆಚ್ಚಿಸಿತು. ಗೋಕಾಕರು ಸ್ವತಃ ಅನೇಕ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಕನ್ನಡದ ಅಭಿವೃದ್ಧಿಗೆ, ಸಾಹಿತ್ಯ ಸಂಪತ್ತಿಗೆ ಕಾರಣೀಭೂತರಾಗಿದ್ದಾರೆ. ಅವರು ತಮ್ಮ ಕನ್ನಡಪರ ಹೋರಾಟ, ಬರಹ ಮತ್ತು ಬೋಧನೆಗಳಿಂದ ಕನ್ನಡಕ್ಕೆ ಶಕ್ತಿ ತುಂಬಿದ್ದರು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿದ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ವೈದೇಶ್ ಕುಮಾರ್, ಕೈಲಾಸಪುರಂ ಸರ್ಕಾರಿ ಪ್ರೌಢಶಾಲೆಯ ಸಮೀನಾ ಕೌಶರ್, ವಿನಾಯಕನಗರ ಸರ್ಕಾರಿ ಪ್ರೌಢಶಾಲೆಯ ದಾಕ್ಷಾಯಿಣಿ ಮತ್ತು ಸೌಜನ್ಯಾ, ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಎಂ.ಲಕ್ಷ್ಮೀ ಮತ್ತು ಡಿ.ಮೇಘಾ ಹಾಗೂ ಲಲಿತಾ ಪ್ರೌಢಶಾಲೆಯ ದಾಕ್ಷಾಯಿಣಿ ಅವರನ್ನು ಪುರಸ್ಕರಿಸಲಾಯಿತು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ನಾಗರಾಜು (ಪ್ರಥಮ), ಪಾರ್ವತಿ(ದ್ವಿತೀಯ), ಸಿಂಚನಾ(ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಲೇಖಕಿ ಡಾ.ಜಮುನಾರಾಣಿ ಮಿರ್ಲೆ, ಮುಕ್ತಕ ಕವಿ ಎಂ.ಮುತ್ತುಸ್ವಾಮಿ, ಮುಖ್ಯ ಶಿಕ್ಷಕಿ ನಾಗವೇಣಿ, ಕೆ.ಜಿ.ಮಹೇಶ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿಜಿ, ಶಿವಣ್ಣ ಇತರರಿದ್ದರು.