

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 59 ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಮಂಜೂರಾತಿ ನೀಡಿದ್ದಾರೆ.
ಕೆಲವು ತಾಲೂಕುಗಳಲ್ಲಿ ನ್ಯಾಯಬೆಲೆ ಅಂಗಡಿಗಳು ರದ್ದಾಗಿದ್ದವು. ಅಂಥ ಸ್ಥಳಗಳಲ್ಲಿ ಮರು ಸ್ಥಾಪನೆಗೆ ಅನುಮೋದಿಸಲಾಗಿದೆ. ದೂರದ ಸ್ಥಳಕ್ಕೆ ಪಡಿತರ ತರಲು ಓಡಾಡಬೇಕು ಎಂದು ಸಾರ್ವಜನಿಕರಿಂದ ಪಡಿತರ ಅಂಗಡಿ ಪ್ರಾರಂಭಿಸಲು ಬೇಡಿಕೆ ಬಂದಿತ್ತು. ಹಾಗೆ ಸ್ವೀಕರಿಸಿರುವ ಮನವಿ ಹಾಗೂ ತಾಲೂಕು ತಹಸೀಲ್ದಾರರು ಸಲ್ಲಿಸಿರುವ ಪ್ರಸ್ತಾವನೆಗಳನ್ನು ಕರ್ನಾಟಕ ಸರ್ಕಾರದ ನಡವಳಿ ಆದೇಶದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ಸಭೆ ದಿನಾಂಕ 20-08-2026 ರಲ್ಲಿ ಅನುಮೋದನೆ ನೀಡಿದೆ.
ಜಿಲ್ಲಾ ವ್ಯಾಪ್ತಿಗೆ ಒಳಪಡುವ 12 ತಾಲೂಕುಗಳ ಒಟ್ಟು 59 ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಸೆ. 5 ರಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈಗಾಗಲೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸೆ.5 ರಂದು ಅಂಕೋಲಾ ತಾಲೂಕಿನಲ್ಲಿ ಜರುಗಿದ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ.
ಕರ್ನಾಟಕ ಅಗತ್ಯ ವಸ್ತುಗಳ (ಸಾರ್ವಜನಿಕ ವಿತರಣಾ ವ್ಯವಸ್ಥೆ) ನಿಯಂತ್ರಣ ಆದೇಶ 2016 ಹಾಗೂ ತಿದ್ದುಪಡಿಗಳನ್ವಯ ಆಸಕ್ತ ಅರ್ಹರಿರುವ ಸಂಘ ಸಂಸ್ಥೆಗಳು, ಸಹಕಾರ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳು (ವಿಕಲಚೇತನ ಮತ್ತು ತೃತೀಯಲಿಂಗ ವ್ಯಕ್ತಿಗಳು) ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಯಿಂದ ನಮೂನೆ ʼಎʼ ರಲ್ಲಿ ಅರ್ಜಿಯನ್ನು ಪಡೆದುಕೊಂಡು ಅರ್ಜಿಗಳನ್ನು ಅ.5 ಸಂಜೆ 5.30 ಗಂಟೆ ಒಳಗಾಗಿ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.