8 ಗ್ರಾಂ ಚಿನ್ನಕ್ಕಾಗಿ ಯುವತಿಯ ಜೀವನ ನರಕ

ಕಲ್ಲು ಎತ್ತು ಹಾಕಿ ಕೊಲೆ ಯತ್ನ
ಯೋಗೇಶ್ವರಿ ಹಾಗೂ ಕುಟುಂಬದವರು
ಯೋಗೇಶ್ವರಿ ಹಾಗೂ ಕುಟುಂಬದವರು
Published on: 

ಕಾರವಾರ: ಎಂಟು ಗ್ರಾಂ ಚಿನ್ನದ ಆಸೆಗಾಗಿ ಮಹಿಳೆಯೊಬ್ಬಳು ಬಡ ಯುವತಿಯ ಜೀವನವನ್ನೇ ನರಕವಾಗಿಸಿದ ಕರುಳು ಹಿಂಡುವ ಕತೆಯಿದು. ಇದೇ ವರ್ಷ ಮೇ 12 ರಂದು ಮಣಿಪಾಲದಲ್ಲಿ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಅಂಕೋಲಾದ ಕೂರ್ವೆ ಎಂಬ ದ್ವೀಪ ಗ್ರಾಮದ ಯೋಗೇಶ್ವರಿ ಸೀತಾರಾಮ ಹರಿಕಂತ್ರ ಎಂಬ 25 ವರ್ಷದ ಯುವತಿ ತೀವ್ರವಾಗಿ ಗಾಯಗೊಂಡಿದ್ದಳು. 5 ತಿಂಗಳು ನಿರಂತರ ಚಿಕಿತ್ಸೆ ಪಡೆದ ಬಳಿಕ ಆಕೆ ಕೊಂಚ ಚೇತರಿಸಿಕೊಂಡಿದ್ದಾಳೆ. ಆದರೆ, ಆಕೆಯ ಒಂದು ಕೈ ಹಾಗೂ ಒಂದು ಕಾಲು ಸ್ವಾಧೀನ ಕಳೆದುಕೊಂಡಿದೆ. ಜನರನ್ನು ಗುರುತಿಸುತ್ತಾಳಾದರೂ ಸಹ ಮಾತನಾಡಲಾಗದು. ಬೇರೆಯವರೇ ಊಟ ಮಾಡಿಸಬೇಕು. ನಿತ್ಯ ಕರ್ಮಗಳಿಗೆ ಬೇರೆಯವರ ಸಹಾಯ ಅಗತ್ಯ ಮನೆಯವರೇ ಆಕೆಯನ್ನು ಹೊತ್ತುಕೊಂಡು ಓಡಾಡುವ ಪರಿಸ್ಥಿತಿ ಇದೆ. ಒಟ್ಟಿನಲ್ಲಿ ಆಕೆಯವರ ಹಾಗೂ ಮನೆಯವರ ಜೀವನ ನರಕವಾಗಿದೆ.

ಆಗಿದ್ದೇನು..?

ಯೋಗೇಶ್ವರಿ ಅವರದ್ದು ಬಡ ಕುಟುಂಬ ತಂದೆ ಹಾಗೂ ಅಣ್ಣ ಇಬ್ಬರೂ ಮೀನುಗಾರಿಕೆ ದೋಣಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.  ದಿನದ ಊಟವನ್ನು ದುಡಿದು ತಿನ್ನುವ ಪರಿಸ್ಥಿತಿ ಅವರಿಗಿದೆ. ಯೋಗೇಶ್ವರಿ ಕಳೆದ ಐದು ವರ್ಷಗಳಿಂದ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಖಾಸಗಿ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಣಿಪಾಲದಲ್ಲಿ ಮೂವರು ಇತರ ಯುವತಿಯರ ಜೊತೆ ಬಾಡಿಗೆ ಕೊಠಡಿಯಲ್ಲಿದ್ದರು. ಬೆಳಗ್ಗೆಯಿಂದ ಸಾಯಂಕಾಲ 4 ಗಂಟೆಯವರೆಗಿನ ಶಿಫ್ಟ್ನಲ್ಲಿ ಕಾರ್ಯ ನಿರ್ವಹಿಸಿದರೆ, ಆಕೆಯ ಇನ್ನಿಬ್ಬರು ಗೆಳತಿಯುರು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದರು. ಮೇ 12 ರ ರಾತ್ರಿ ಯೋಗೇಶ್ವರಿ ಕೆಲಸ ಮುಗಿಸಿ ರೂಂನಲ್ಲಿ ರಾತ್ರಿ ಮಲಗಿದ್ದರು. ಮೇ 13 ರ ಬೆಳಗ್ಗೆ ಬಂದು ನೋಡಿದ ಸ್ನೇಹಿತೆಯರು ಹೌಹಾರಿದ್ದರು. ಯೋಗೇಶ್ವರಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಲಾಗಿತ್ತು. ಪ್ರಜ್ಞೆ ಇರಲಿಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಮಿದುಳಿಗೆ ಹೊಡೆತ ಬಿದ್ದಿತ್ತು. ಕಣ್ಣಿನ ಮೂಳೆ ಮುರಿದಿತ್ತು. ಆಕೆ ಉಸಿರಾಡಲು ಆಹಾರ ಪಡೆಯಲೂ ಆಗುತ್ತಿರಲಿಲ್ಲ. ಮಣಿಪಾಲ ಕೆಎಂಸಿ, ಮಂಗಳೂರಿನ ಕೆಎಸ್ ಹೆಗಡೆ, ಕುಮಟಾದ ಸರ್ಕಾರಿ ಆಸ್ಪತ್ರೆ, ಮಂಗಳೂರಿನ ಫಸ್ಟ್ ನ್ಯೂರೋ ಹೀಗೆ ಎಲ್ಲ ಆಸ್ಪತ್ರೆಗಳಿಗೆ ಆಕೆಯನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ನಂತರ ಆಕೆಗೆ ಪ್ರಜ್ಞೆಯೇನೋ ಬಂದಿದೆ. ಆದರೆ, ಇದುವರೆಗೂ ಆರೋಗ್ಯ ಸುಧಾರಿಸಿಲ್ಲ.

ರಾಕ್ಷಸೀ ಕೃತ್ಯ:

ಅಂಕೋಲಾ ಮೂಲದವಳೇ ಆಗಿದ್ದ ಮಣಿಪಾಲದಲ್ಲಿ ವಾಸವಿದ್ದ ಸುಷ್ಮಾ ಅಣ್ಣಪ್ಪ ನಾಯ್ಕ ಎಂಬ ಮಹಿಳೆ ಯೋಗೇಶ್ವರಿಯ ಕಿವಿಯಲ್ಲಿದ್ದ 8 ಗ್ರಾಂ ಓಲೆಯನ್ನು ಕದಿಯುವ ಸಲುವಾಗಿ ರಾಕ್ಷಸೀ ಕೃತ್ಯ ಮಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಮಣಿಪಾಲ ಠಾಣೆ ಪೊಲೀಸರು ಆಕೆಯನ್ನು ಬಂಽಸಿದ್ದಾರೆ. ಸುಷ್ಮಾ ಕದ್ದಿದ್ದ ಓಲೆಯನ್ನು ಆಕೆಯಿಂದ ವಶಕ್ಕೆ ಪಡೆಯಲಾಗಿದೆ. ಪಕ್ಕದ ಕೊಠಡಿಯಲ್ಲಿ ವಾಸವಿದ್ದ ಸುಷ್ಮಾ ಯೋಗೇಶ್ವರಿಯೊಂದಿಗೆ ಸಲುಗೆ ಬೆಸೆದು ಆಕೆಯ ಜೊತೆಗೇ ರೂಂನಲ್ಲಿ ಮಲಗಿ ನಂತರ ನಡು ರಾತ್ರಿ ಕೃತ್ಯ ಎಸಗಿ, ತನ್ನ ಕೊಠಡಿಗೆ ಹೋಗಿ ಮಲಗಿರುವುದು ತಿಳಿದು ಬಂದಿದೆ. ಮರುದಿನ ಯೋಗೇಶ್ವರಿ ಅವರನ್ನು ಆಸ್ಪತ್ರೆಗೆ ಸೇರಿಸುವಾಗ ಸುಷ್ಮಾ ಕೂಟ ಜೊತೆಗಾಗಿ ಮರುಕದ ನಾಟಕವಾಡಿದ್ದಳು.

ಸಮಾಜದ ಬೆಂಬಲ

ಯೋಗೇಶ್ವರಿಗೆ ಈ ಪರಿಸ್ಥಿತಿ ತಂದಿಟ್ಟ ಸುಷ್ಮಾ ನಾಯ್ಕಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಯೋಗಿತಾಳ ಚಿಕಿತ್ಸೆಗೆ ಕೈಲಾದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಾಜದ ಮುಖಂಡು ಕುಟುಂಬಕ್ಕೆ ಬೆಂಬಲ ಘೋಷಿಸಿದರು. ಪ್ರಮುಖರಾದ ಗಣಪತಿ ಮಾಂಗ್ರೆ, ರಾಜು ಹರಿಕಂತ್ರ, ಹೂವಾ ಖಂಡೇಕರ್, ಶ್ರೀಕಾಂತ ದುರ್ಗೇಕರ್, ಹರಿಹರ ಹರಿಕಂತ್ರ, ಚಿದಾನಂದ ಇತರರು ಇದ್ದರು.