ಮಾವಿನಮನೆ ಗ್ರಾಪಂ ವ್ಯಾಪ್ತಿಯಲ್ಲಿ ರೋಗಭೀತಿ Phobia

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಕೈಗಾ ಅಣುಸ್ಥಾವರದ ಅಣು ವಿಕಿರಣ ಪರಿಣಾಮ ವದಂತಿ
  • ಹೆಚ್ಚುತ್ತಿದೆ ಕ್ಯಾನ್ಸರ್ ರೋಗಿಗಳ ಸಂಖ್ಯೆ
ಯಲ್ಲಾಪುರ: ತಾಲೂಕಿನ ಮಾವಿನಮನೆ ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕ್ಯಾನ್ಸರ್, ಬ್ರೇನ್ ಟ್ಯೂಮರ್, ಅಂಗವೈಕಲ್ಯದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸಮೀಪದಲ್ಲೇ ಇರುವ ಕೈಗಾ ಅಣುಶಕ್ತಿ ಸ್ಥಾವರದ ಅಣು ವಿಕಿರಣದ ಪರಿಣಾಮ ಇದು ಎಂಬ ವದಂತಿ ಆತಂಕ ಹೆಚ್ಚಲು ಕಾರಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮಾವಿನಮನೆ ಹಾಗೂ ಸಮೀಪದ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕ್ಯಾನ್ಸರ್ ರೋಗಿಗಳು ಹೆಚ್ಚುತ್ತಿದ್ದಾರೆ. ಸದ್ಯ ಇಬ್ಬರು ಇದೇ ರೋಗಕ್ಕೆ ಬಲಿಯಾಗಿದ್ದಾರೆ. ಬ್ರೇನ್ ಟ್ಯೂಮರ್ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಕಾಣಿಸಿಕೊಳ್ಳುತ್ತಿದೆ.
ಮಾವಿನಮನೆಯಿಂದ ಕೇವಲ 16 ಕಿಮೀ ದೂರದಲ್ಲಿರುವ ಕೈಗಾ ಅಣುಶಕ್ತಿ ಸ್ಥಾವರದಿಂದ ಹೊರಸೂಸುವ ವಿಕಿರಣಗಳ ಪ್ರಭಾವ ಇರಬಹುದೆ ಎಂಬ ಪ್ರಶ್ನೆ ಮೂಡಿದೆ. ಕೆಲವರಂತೂ ವಿಕಿರಣಗಳೇ ಇದಕ್ಕೆ ಕಾರಣ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ಹಾಗಾಗಿ ಜನರಲ್ಲಿ ಗೊಂದಲ ಮೂಡಿದ್ದಲ್ಲದೆ, ಭಯ ಹೆಚ್ಚುವಂತೆ ಮಾಡಿದೆ.
ಈ ಗೊಂದಲ ಪರಿಹರಿಸಲು ತಿಂಗಳುಗಳ ಹಿಂದೆಯೇ ಗ್ರಾಮ ಪಂಚಾಯಿತಿ ಮುಂದಾಗಿತ್ತು. ಗ್ರಾಮಸಭೆಯಲ್ಲಿ ಠರಾವು ಮಾಡಿ, ಕೈಗಾದ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿತ್ತು.
‘ಮಾವಿನಮನೆ ಗ್ರಾಮ ಕೈಗಾದಿಂದ 16 ಕಿಮೀ ದೂರದಲ್ಲಿದೆ. ಆದರೆ, ನಾವು ಪ್ರತಿನಿತ್ಯ ಕೈಗಾದ ಅಣುಸ್ಥಾವರದ ಬಳಿಯಲ್ಲೇ ವಾಸಿಸುತ್ತೇವೆ. ಅದರಿಂದ ರೋಗಗಳು ಬರುವುದಿದ್ದರೆ ಮೊದಲು ನಮಗೇ ಬರಬೇಕಿತ್ತು, ನಮಗೇನೂ ತೊಂದರೆಯಾಗಿಲ್ಲ, ಆರೋಗ್ಯವಾಗಿದ್ದೇವೆ’ ಎನ್ನುತ್ತಾರೆ ಕೈಗಾದ ಅಧಿಕಾರಿಗಳು ಹಾಗೂ ಸಿಬ್ಬಂದಿ.
ಅಧಿಕಾರಿಗಳ ವಾದವನ್ನೂ ಅಲ್ಲಗಳೆಯುವಂತಿಲ್ಲ. ಜನರಲ್ಲಿ ರೋಗಗಳು ಹೆಚ್ಚುತ್ತಿರುವುದೂ ಸುಳ್ಳಲ್ಲ. ಹಾಗಿದ್ದರೆ ರೋಗ ಹೆಚ್ಚಳಕ್ಕೆ ನಿಜವಾದ ಕಾರಣ ಏನು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ.
ಸಮೀಕ್ಷೆ ನಡೆಯಲಿ: ರೋಗಗಳ ಕುರಿತು ಜನರಲ್ಲಿ ಗೊಂದಲ ಹೆಚ್ಚಾಗಿದೆ. ಈ ಬಗ್ಗೆ ಎರಡು ತಿಂಗಳುಗಳ ಹಿಂದೆ ನಡೆದ ಗ್ರಾಮಸಭೆಯಲ್ಲೂ ಚರ್ಚೆಯಾಗಿತ್ತು. ಶಾಸಕರ ನೇತೃತ್ವದಲ್ಲಿ ಯಲ್ಲಾಪುರದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪವಾಗಿದೆ. ಎಲ್ಲ ಗೊಂದಲಗಳ ಪರಿಹಾರಕ್ಕಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ಜಿಲ್ಲೆ ಅಥವಾ ರಾಜ್ಯಮಟ್ಟದ ಅಧಿಕಾರಿಗಳಿಂದ ಸಮೀಕ್ಷೆ ನಡೆಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
"

ಕೈಗಾದ ಅಧಿಕಾರಿಗಳ ಮೇಲಾಗಲೀ, ಅಣುಸ್ಥಾವರದ ಮೇಲಾಗಲೀ ನಮ್ಮ ಆಕ್ಷೇಪ ಇಲ್ಲ. ಅನಗತ್ಯವಾದ ವದಂತಿಗಳು ಹಬ್ಬಿ, ಆತಂಕ ಹೆಚ್ಚಿಸುವ ಪ್ರವೃತ್ತಿ ನಿಲ್ಲಬೇಕು. ಸತ್ಯಾಸತ್ಯತೆ ಏನು ಎಂಬುದು ಜನರಿಗೆ ತಿಳಿಯಬೇಕು. ಆ ಕಾರಣಕ್ಕಾಗಿ ಸಮೀಕ್ಷೆ ನಡೆಯಬೇಕು.
ಸುಬ್ಬಣ್ಣ ಕುಂಟೆಕುಳಿ
ಮಾಜಿ ಅಧ್ಯಕ್ಷ, ಗ್ರಾಪಂ ಮಾವಿನಮನೆ

ಮಾವಿನಮನೆ ಭಾಗದಲ್ಲಿ ರೋಗಗಳ ಹೆಚ್ಚಳದ ಕುರಿತು ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗುವುದು.
ಶಿವರಾಮ ಹೆಬ್ಬಾರಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net