ದಾಂಡೇಲಿಯ ಶಂಕರ ಮಠದಲ್ಲಿ ಮಹಿಳೆಯರಿಗಾಗಿ (Women)ಭಾನುವಾರ ಹಮ್ಮಿಕೊಂಡಿದ್ದ ಆಹಾರ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ರೇಖಾ ಹೆಗಡೆ ಮಾತನಾಡಿದರು. ಸುರೇಶ ಹೆಗಡೆ, ಸುಧಾಕರ ಶೆಟ್ಟಿ, ಶೋಭಾ ಮುದ್ದಪ್ಪನವರ, ಇತರರಿದ್ದರು.
ದಾಂಡೇಲಿ: ಪೌಷ್ಟಿಕಾಂಶ, ವ್ಯಾಯಾಮ ಮತ್ತು ಮಾನಸಿಕ ಯೋಗಕ್ಷೇಮ ಒಳಗೊಂಡಿರುವ ಆರೋಗ್ಯಕರ ಅಭ್ಯಾಸಗಳನ್ನು ಪ್ರತಿಯೊಬ್ಬ ಮಹಿಳೆಯೂ (Women) ನಿತ್ಯದ ಜೀವನದಲ್ಲಿ ರೂಢಿಸಿಕೊಂಡು ಆರೋಗ್ಯವಂತಳಾಗಿ ಜೀವನ ನಡೆಸಬೇಕು ಎಂದು ಡಾ.ರೇಖಾ ಹೆಗಡೆ ಹೇಳಿದರು.
ನಗರದ ಶ್ರೀ ಶಂಕರ ಮಠದಲ್ಲಿ ಆರೋಗ್ಯ ಭಾರತಿ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಆಹಾರ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಭಾರತಿ ಸಂಸ್ಥೆಯ ಶಿರಸಿ ಘಟಕದ ಅಧ್ಯಕ್ಷ ಸುರೇಶ ಹೆಗಡೆ, ದಾಂಡೇಲಿಯ ಆರೋಗ್ಯ ಭಾರತಿ ಘಟಕದ ಅಧ್ಯಕ್ಷ ಸುಧಾಕರ ಶೆಟ್ಟಿ ಮತ್ತು ಶಿಕ್ಷಕಿ ಶೋಭಾ ಮುದ್ದಪ್ಪನವರ ಮಾತನಾಡಿ, ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ರಾಷ್ಟ್ರದ ಆರ್ಥಿಕತೆಗೂ ಸ್ತ್ರೀಯರ ಕೊಡುಗೆ ಅಪಾರವಾಗಿದೆ. ಇಡೀ ಸಮಾಜವನ್ನು ಜಾಗೃತಗೊಳಿಸುವ ಶಕ್ತಿ ಮಹಿಳೆಯರಿಗಿದೆ. ವಿಶೇಷವಾಗಿ ಮಹಿಳೆಯರು ತಮ್ಮ ಆರೋಗ್ಯ ರಕ್ಷಣೆಯತ್ತ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಭಾರತಿ ಸಂಸ್ಥೆಯ ಶಿರಸಿ ವಿಭಾಗದ ಸಹ ಸಂಯೋಜಕ ನಾಗೇಶ ಪತ್ತಾರ ಮಾತನಾಡಿ, ಮಹಿಳೆ ಒಂದು ಮನೆಯ ಬೆಳಗುತ್ತಿರುವ ದೀಪ. ಮನೆಯಲ್ಲಿರುವ ಮಹಿಳೆಯರು ಸದೃಢ ಆರೋಗ್ಯ ಹೊಂದಿದ್ದರೆ ಮಾತ್ರ ಇಡೀ ಮನೆಯಲ್ಲಿ ಸಂತೃಪ್ತಿ, ಹಾಗೂ ನೆಮ್ಮದಿಯ ವಾತಾವರಣ ಇರಲು ಸಾಧ್ಯವಾಗುತ್ತದೆ ಎಂದರು.
ನೀಲಂ ರಾಯ್ಕ, ದೀಪಾ ಬ್ಯಾಳೆ ಹಾಗೂ ಸಿಯಾ ರಾಯ್ಕ ಕಾರ್ಯಕ್ರಮ ನಿರ್ವಹಿಸಿದರು.