ಯಲ್ಲಾಪುರ: ಮೀನು, ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಸರ್ಕಾರಿ ನೌಕರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರಿನಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಯಾಗಿರುವ ಮಂಚಿಕೇರಿಯ ಅಜಯ ಗಣೇಶ ಭಂಡಾರಕರ ಎಂಬಾತ ಹಲ್ಲೆ ನಡೆಸಿದ ವ್ಯಕ್ತಿ. ಮಂಚಿಕೇರಿಯ ಮಾಗೋಡ ಕ್ರಾಸ್ ಬಳಿ ಮೀನು ಮಾರುತ್ತಿದ್ದ ಅಂಕೋಲಾದ ಸರಸ್ವತಿ ಕುಡತಳಕರ ಎಂಬುವರ ಬಳಿ ಏಕಾಏಕಿ ಬಂದ ಈತ, ಮೀನಿನ ಬುಟ್ಟಿ ಎಳೆದಾಡಿ, ಮೀನುಗಳನ್ನೆಲ್ಲ ಚೆಲ್ಲಾಡಿದ್ದಾನೆ. ನಂತರ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಪಕ್ಕದಲ್ಲಿ ತರಕಾರಿ ಮಾರುತ್ತಿದ್ದ ಸೀತಾ ಶಶಿಧರ ಲಮಾಣಿ ಅವರು ಜಗಳ ಬಿಡಿಸಲು ಹೋದಾಗ, ಅವರ ಮೇಲೂ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸೀತಾ ಲಮಾಣಿ ದೂರು ನೀಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯರ ಮೇಲೆ ಅಜಯ ಹಲ್ಲೆಗೆ ಮುಂದಾಗಿರುವುದನ್ನು ಕಂಡು ಆಕ್ರೋಶಗೊಂಡ ಸಾರ್ವಜನಿಕರು ಅಜಯಗೆ ಧರ್ಮದೇಟು ನೀಡಿದ್ದಾರೆ.