ಶಿರಸಿ: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇ ನಿರ್ಮಾಣ ಕಾಮಗಾರಿ ಈಗ ಬಹುತೇಕ ಮುಕ್ತಾಯಗೊಂಡಿದೆ. ವಾಹನಗಳು ಈಗ ಶರವೇಗದಲ್ಲಿ ಈ ಮಾರ್ಗದಲ್ಲಿ ಸಾಗುತ್ತಿವೆ.
ಆದರೆ, ಆರು ವರ್ಷಗಳ ಹಿಂದೆ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸುವ ವೇಳೆ ರಸ್ತೆ ವಿಸ್ತರಣೆಯ ವೇಳೆ ತೆರವುಗೊಳಿಸಲಾಗಿದ್ದ ಬಸ್ ತಂಗುದಾಣಗಳ ನಿರ್ಮಾಣ ಕಾರ್ಯ ಮಾತ್ರ ಈ ಮಾರ್ಗದಲ್ಲಿ ಇನ್ನೂ ಆಗಿಲ್ಲ. ಸುಡು ಬಿಸಿಲಿನಲ್ಲಿ ನಿಂತು ತಲೆ ಕಾಯಿಸಿಕೊಳ್ಳುತ್ತ ಬಸ್ ಕಾಯುವ ಪರಿಸ್ಥಿತಿ ಮಾತ್ರ ಇಲ್ಲಿಯ ಪ್ರಯಾಣಿಕರಿಗೆ ತಪ್ಪಿಲ್ಲ.
ಹೌದು, ಈ ರಸ್ತೆಯ ಸುಮಾರು 10ಕ್ಕೂ ಅಧಿಕ ಕಡೆ ತಂಗುದಾಣ ಒಡೆದುಹಾಕಿ ಆರು ವರ್ಷಗಳೇ ಕಳೆದಿವೆ. ಈ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 2018ರಲ್ಲಿ ಹಸಿರು ನಿಶಾನೆ ನೀಡಿತ್ತಾದರೂ ಅರಣ್ಯ ಇಲಾಖೆಯ ಅನುಮತಿ ದೊರೆಯುವಲ್ಲಿ ವಿಳಂಬವಾಗಿ, 2021ರ ವೇಳೆ ಕಾಮಗಾರಿ ಆರಂಭಗೊಂಡಿತ್ತು.
ಅದುವರೆಗೂ ರಾಜ್ಯ ಹೆದ್ದಾರಿ ಆಗಿದ್ದ ಈ ಮಾರ್ಗ ಸುಮಾರು 5.5 ರಿಂದ 7 ಮೀಟರ್‌ಗಳಷ್ಟು ಅಗಲ ಹೊಂದಿತ್ತು. ರಸ್ತೆಗೆ ತಾಗಿಯೇ ಅಂದಿನ ದಿನಗಳಲ್ಲಿ ಬಸ್ ತಂಗುದಾಣಗಳನ್ನೂ ನಿರ್ಮಿಸಲಾಗಿತ್ತು. ರಸ್ತೆ ವಿಸ್ತರಣೆಗೆ 12 ಮೀಟರ್ ಜಾಗ ಬಳಸಿಕೊಳ್ಳಲು ಗುತ್ತಿಗೆದಾರ ಕಂಪನಿ ಆರ್‌ಎನ್‌ಎಸ್ ಗೆ ಅನುಮತಿ ಸಿಕ್ಕಿದ್ದರಿಂದ ಮೊದಲ ಕಾರ್ಯವಾಗಿ ರಸ್ತೆಯ ಈ ವ್ಯಾಪ್ತಿಯಲ್ಲಿದ್ದ ಮರಗಳನ್ನು ತೆಗೆಲಾಗಿದೆ.
ಇದೇ ವೇಳೆ ರಸ್ತೆ ಪಕ್ಕದಲ್ಲಿದ್ದ ಬಸ್ ಸ್ಟಾಪ್‌ಗಳನ್ನೂ ಕೆಲವೆಡೆ ಜೆಸಿಬಿ ಬಳಸಿ ತೆಗೆಯಲಾಗಿತ್ತು. ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಾರೂಗಾರ್, ಗೋಳಿ ಕ್ರಾಸ್, ಮುಳಖಂಡ, ಚಿಕ್ಕಡಿ ಸೇರಿದಂತೆ ಸುಮಾರು 10ಕ್ಕೂ ಅಧಿಕ ಬಸ್ ತಂಗುದಾಣಗಳು ರಸ್ತೆ ವಿಸ್ತರಣೆಯ ವೇಳೆ ನೆಲ ಕಚ್ಚಿವೆ.
ಇಲ್ಲಿಯ ಗೋಳಿ ಕ್ರಾಸ್ ಬಳಿ ರಸ್ತೆಯನ್ನು ತಗ್ಗಿಸಿದ್ದರಿಂದ ಬಸ್ ಸ್ಟಾಪ್ ಎತ್ತರದಲ್ಲಿದ್ದು, ಯಾರಿಗೂ ಹತ್ತಿ ಕುಳಿತುಕೊಳ್ಳಲು ಸಾಧ್ಯವಾಗದಂತಾಗಿದೆ. ಇಲ್ಲಿನ ಸಾರ್ವಜನಿಕರು ಇಷ್ಟು ವರ್ಷಗಳ ಕಾಲ ಬಿಸಿಲಲ್ಲೇ ನಿಂತು ಬಸ್ ಕಾದು ಈ ವರ್ಷ ಅಡಕೆಯ ಸೋಗೆಯ ಛಾವಣಿ ಹಾಕಿ ಶ್ರಮದಾನದ ಮೂಲಕ ಅಡಕೆಯ ದಬ್ಬೆಯ ಕುಳಿತುಕೊಳ್ಳುವ ಮಂಚ ನಿರ್ಮಿಸಿಕೊಂಡಿದ್ದಾರೆ.
ಹಾರೂಗಾರ್ ಬಸ್ ಸ್ಟಾಪ್ ಕಿತ್ತು ಹಾಕಿ ರಸ್ತೆ ವಿಸ್ತರಿಸಿದ ಮೇಲೆ ಇಲ್ಲಿ ನಿಂತುಕೊಳ್ಳಲೂ ಜಾಗವಿಲ್ಲದ ಸ್ಥಿತಿ ಉಂಟಾಗಿದೆ. ಕುಮಟಾ ತಾಲೂಕಿನ ಅನೇಕ ಕಡೆಯಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದ್ದು, ಪ್ರಯಾಣಿಕರು ಪೇಚು ಅನುಭವಿಸುತ್ತಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮುಂದಾಳತ್ವದಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ತೆರವುಗೊಳಿಸಲಾದ ಬಸ್ ಸ್ಟಾಪ್‌ಗಳ ಪುನರ್ ನಿರ್ಮಾಣದ ಬಗ್ಗೆಯೂ ಪ್ರಸ್ತಾಪವಾಗಿತ್ತು.
ಬಸ್ ಕಾಯುತ್ತಿರುವವರು ರಸ್ತೆಯನ್ನು ದಾಟಿ ಬಸ್ ಏರುವಂತಾಗಬಾರದು. ಇದರಿಂದ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಪ್ರತಿ ಬಸ್‌ಸ್ಟಾಪ್‌ಗಳಲ್ಲಿಯೂ ರಸ್ತೆಯ ಆಕಡೆ ಮತ್ತು ಈ ಕಡೆ ಪ್ರತ್ಯೇಕ ಕಟ್ಟಡ ನಿರ್ಮಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ, ಇದಾವುದೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.
ಸತತ ಆರು ವರ್ಷಗಳ ನಂತರ ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಒಂದು ಹಂತಕ್ಕೆ ಬಂದಿದೆ. ರಸ್ತೆ ಪಕ್ಕದಲ್ಲಿ ಸರಾಗವಾಗಿ ನೀರು ಹರಿದುಹೋಗಲು ಚರಂಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಈಗ ಮೈಲಿಗಲ್ಲುಗಳನ್ನು ನಿಲ್ಲಿಸುವ ಕಾರ್ಯ ನಡೆದಿದೆ.
ಆರ್‌ಎನ್‌ಎಸ್ ಇಂಜಿನಿಯರ್‌ಗಳೇ ಹೇಳುವಂತೆ ಇನ್ನು 15 ದಿನಗಳ ಒಳಗಾಗಿ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಶಿರಸಿ ಹಾವೇರಿ ರಸ್ತೆ ನಿರ್ಮಾಣದ ಗುತ್ತಿಗೆಯನ್ನೂ ಆರ್‌ಎನ್‌ಎಸ್ ವಹಿಸಿಕೊಂಡಿರುವುದರಿಂದ ಕಂಪನಿಯ ಇಂಜಿನಿಯರ್‌ಗಳ ಚಿತ್ತ ಆಕಡೆ ಹರಿದಿದೆ.
ಕೆಲಸಗಾರರು, ಕಂಪನಿಯ ಮುಖ್ಯಸ್ಥರೆಲ್ಲ ಅತ್ತ ಗಮನ ಹರಿಸಿದ್ದಾರೆ. ಇತ್ತ ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಡವಲಾದ ಬಸ್ ತಂಗುದಾಣಗಳ ಪುನರ್ ನಿರ್ಮಾಣವಾಗದೇ ಪ್ರಯಾಣಿಕರ ಗೋಳು ಮುಂದುವರಿದಿದೆ.
ಮಕ್ಕಳು, ವಯಸ್ಸಾದವರೊಂದಿಗೆ ಬಸ್ ಕಾಯುವಾಗ ಕುಳಿತುಕೊಳ್ಳಲೂ ಜಾಗವಿಲ್ಲದಂತಾಗಿದೆ. ಮಳೆಗಾಲದ ದಿನಗಳಲ್ಲಂತೂ ನಾವು ಪ್ರತಿ ದಿನ ಸಮಸ್ಯೆ ಎದುರಿಸಿದ್ದೇವೆ. ಇನ್ನಾದರೂ ಉತ್ತಮ ಬಸ್ ತಂಗುದಾಣ ನಿರ್ಮಿಸಿಕೊಡಲಿ.
ಸುರೇಖಾ ನಾಯ್ಕ, ಗೃಹಿಣಿ