ಅಗೆದ ಹೊಂಡ ಮುಚ್ಚುವವರು ಯಾರು?

ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ-ವಾಜಗದ್ದೆ ಮುಖ್ಯ ರಸ್ತೆಯ ಪಕ್ಕದಲ್ಲಿ ಬಿಎಸ್‌ಎನ್‌ಎಲ್ ಇಲಾಖೆಯವರು ಕೇಬಲ್ ಅಳವಡಿಸಲು ತೆಗೆದ ಹೊಂಡ ಮುಚ್ಚದೇ ಹಾಗೇ ಬಿಟ್ಟಿರುವುದು.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ-ವಾಜಗದ್ದೆ ಮುಖ್ಯ ರಸ್ತೆಯ ಪಕ್ಕದಲ್ಲಿ ಬಿಎಸ್‌ಎನ್‌ಎಲ್ ಇಲಾಖೆಯವರು ಕೇಬಲ್ ಅಳವಡಿಸಲು ತೆಗೆದ ಹೊಂಡ ಮುಚ್ಚದೇ ಹಾಗೇ ಬಿಟ್ಟಿರುವುದು.
Published on
ಸಿದ್ದಾಪುರ: ತಾಲೂಕಿನ ಮುಖ್ಯ ಗ್ರಾಮೀಣ ರಸ್ತೆ ಹಾಗೂ ನಿತ್ಯ ಸಾವಿರಾರು ವಾಹನ ಸಂಚರಿಸುವ ಹಾರ್ಸಿಕಟ್ಟಾ-ವಾಜಗದ್ದೆ-ಹದಿನಾರನೇ ಮೈಲಕಲ್ ರಸ್ತೆಯ ಹಾರ್ಸಿಕಟ್ಟಾ ವಾಜಗದ್ದೆ ರಸ್ತೆಯ ಪಕ್ಕ ಬಿಎಸ್‌ಎನ್‌ಎಲ್ ಇಲಾಖೆ ಕೇಬಲ್ ಅಳವಡಿಸಲು ರಸ್ತೆಯ ಪಕ್ಕ ತೆಗೆದಿರುವ ಹೊಂಡದಲ್ಲಿ ಕೇಬಲ್ ಅಳವಡಿಸಿ ಎರಡು ತಿಂಗಳುಗಳೇ ಕಳೆದರೂ ಇನ್ನೂ ಹಾಗೇ ಬಿಟ್ಟಿರುವುದರಿಂದ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ.
ಬಿಎಸ್‌ಎನ್‌ಎಲ್ ಇಲಾಖೆ ವತಿಯಿಂದ ವಾಜಗದ್ದೆಯಲ್ಲಿ ಟವರ್ ನಿರ್ಮಿಸಲಾಗಿದೆ. ಈ ಟವರ್‌ಗೆ ಹಾರ್ಸಿಕಟ್ಟಾದಿಂದ ಅಂಡರ್ ಗ್ರೌಂಡ್ ಮೂಲಕ ಕೇಬಲ್ ಅಳವಡಿಸಲು ರಸ್ತೆಯ ಪಕ್ಕದಲ್ಲಿ ಸುಮಾರು ಮೂರು ಅಡಿ ಉದ್ದ ಹಾಗೂ ಮೂರುವರೆಯಿಂದ ನಾಲ್ಕು ಅಡಿಯಷ್ಟು ಆಳದ ಹೊಂಡ ತೆಗೆಯಲಾಗಿತ್ತು. ಈಗಾಗಲೇ ಕೆಬಲ್ ಅಳವಡಿಸಿ ಎರಡು ತಿಂಗಳು ಕಳೆದರೂ ಈವರೆಗೂ ಬಿಎಸ್‌ಎನ್‌ಎಲ್ ಸಂಸ್ಥೆಯಾಗಲಿ ಅಥವಾ ಸಂಬಂಧಪಟ್ಟ ಗುತ್ತಿಗೆದಾರರು ಹೊಂಡ ಮುಚ್ಚುವುದಕ್ಕೆ ಮುಂದಾಗಿಲ್ಲ. ಡಾಂಬರು ರಸ್ತೆಗೆ ಹೊಂಡ ತಾಗಿಕೊಂಡಿರುವುದರಿಂದ ನಿತ್ಯ ವಾಹನ ಸವಾರರು ಜಾಗೃತರಾಗಿಯೇ ವಾಹನ ಚಲಾಯಿಸುವಂತಾಗಿದೆ. ಇದರಿಂದಾಗಿ ಈ ಜಾಗದಲ್ಲಿ ಎದುರಗಡೆಯಿಂದ ಯಾವುದಾದರು ವಾಹನ ಬಂದರೆ ಅವರಿಗೆ ಸೈಡ್ ಕೊಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಕೆಲವು ವಾಹನ ಸವಾರರು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ. ಕೆಲವು ಹೊಂಡದ ಸುತ್ತ ಹುಲ್ಲು ಬೆಳೆದಿರುವುದರಿಂದ ಹೊಂಡವೂ ಕಾಣದಂತಾಗಿದೆ. ಅಲ್ಲದೇ ಸಂಬಂಧ ಪಟ್ಟ ಗುತ್ತಿಗೆದಾರರಾಗಲಿ ಅಥವಾ ಬಿಎಸ್‌ಎನ್‌ಎಲ್ ಇಲಾಖೆಯವರಾಗಲಿ ಹೊಂಡ ಇರುವಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸದೇ ಬೇಜವಬ್ದಾರಿಯಿಂದ ಕಾಲ ಕಳೆಯುತ್ತಿದೆ ಎಂದು ವಾಹನ ಸವಾರರು ಅಸಮಾದಾನ ವ್ಯಕ್ತಪಡಿಸುತಿದ್ದಾರೆ.
ಸಂಬಂಧ ಪಟ್ಟ ಇಲಾಖೆ ಅಥವಾ ಗುತ್ತಿಗೆದಾರರು ದೊಡ್ಡ ಅಪಾಯ ಸಂಭವಿಸುವುದರೊಳಗಾಗಿ ರಸ್ತೆ ಪಕ್ಕದಲ್ಲಿನ ಹೊಂಡ ಮುಚ್ಚುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
"

ಹಾರ್ಸಿಕಟ್ಟಾ-ವಾಜಗದ್ದೆಯ ರಸ್ತೆಯ ಪಕ್ಕದಲ್ಲಿ ಬಿಎಸ್‌ಎನ್‌ಎಲ್‌ನವರು ಕೇಬಲ್ ಅಳವಡಿಸಲು ತೆಗದಿರುವ ಹೊಂಡ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಈಗಾಗಲೇ ಕೇಬಲ್ ಅಳವಡಿಸಿದ್ದರೂ ಹೊಂಡ ಮುಚ್ಚಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿರುವುದರಿಂದ ಸಂಬಂಧ ಪಟ್ಟ ಇಲಾಖೆ ಕೂಡಲೇ ಹೊಂಡ ಮುಚ್ಚಿ ವಾಹನ ಸವಾರರು ನಿರಾತಂಕವಾಗಿ ವಾಹನ ಚಲಾಯಿಸುವುದಕ್ಕೆ ಅವಕಾಶ ಮಾಡಿಕೊಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net