ಗೋಕರ್ಣ:ಇರಾನ್-ಇಸ್ರೇಲ್ ಯುದ್ಧ (War) ಹಿನ್ನೆಲೆಯಲ್ಲಿ ಇಲ್ಲಿನ ವಿವಿಧ ಬೀಚ್ ಮತ್ತಿತರ ಕಡೆಗಳಲ್ಲಿ ತಂಗಿರುವ ವಿದೇಶಿ ಪ್ರವಾಸಿಗರ (Foreigners) ಬಗ್ಗೆ ಸ್ಥಳೀಯ ಪೊಲೀಸರು ಕಳೆದ ಮೂರು ದಿನದಿಂದ ವಿಶೇಷ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ವಿಶೇಷವಾಗಿ ಇಸ್ರೇಲ್ ಮತ್ತು ಯುರೋಪಿನ ವಿವಿಧ ರಾಷ್ಟ್ರಗಳ ಟೂರಿಸ್ಟ್ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕಿದರು.
ಸಾಮಾನ್ಯವಾಗಿ ಮಹಾಶಿವರಾತ್ರಿ ನಂತರ ವರ್ಷದ ವಿದೇಶಿ ಪ್ರವಾಸಿ ಸೀಸನ್ ಕೊನೆಯಾಗುವ ಕಾರಣ ಹೆಚ್ಚಿನ ವಿದೇಶಿಯರು ಈಗಾಗಲೇ ಗೋಕರ್ಣದಿಂದ ಮರಳಿ ಹೋಗಿದ್ದಾರೆ.
ಪೊಲೀಸ್ ದಾಖಲೆ ಪ್ರಕಾರ ಸದ್ಯ ಗೋಕರ್ಣ ಸೇರಿ ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟೂ 110 ವಿವಿಧ ದೇಶಗಳ ಪ್ರವಾಸಿಗರು ವಾಸಿಸುತ್ತಿದ್ದಾರೆ.
ಇಸ್ರೇಲಿಗಳ ನೆಚ್ಚಿನ ತಾಣವಾದ ಓಂ ಬೀಚ್‌ನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಕುಡ್ಲೆ ಬೀಚ್ ಸೇರಿ ಒಟ್ಟೂ 40 ರಿಂದ 50 ಇಸ್ರೇಲಿ ನಾಗರಿಕರಿದ್ದಾರೆ.
ಮಹಾಶಿವರಾತ್ರಿ ವೇಳೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಇಸ್ರೇಲ್ ದೇಶದವರು ಕಳೆದ ಮೂರುದಿನಗಳಿಂದ ಇಲ್ಲಿಂದ ಉತ್ತರ ಭಾರತಕ್ಕೆ ಹೋಳಿ ಹಬ್ಬದ ವೀಕ್ಷಣೆಗಾಗಿ ತೆರಳಿದ್ದು ಅಲ್ಲಿಂದ ಸ್ವದೇಶಕ್ಕೆ ವಾಪಸಾಗುವರು.
ಇಲ್ಲಿರುವ ಎಲ್ಲರೂ ಅತ್ಯಂತ ಉತ್ಸಾಹದಿಂದಿದ್ದು ಸರದಿಯಂತೆ ಅವರೆಲ್ಲರೂ ತಮ್ಮ ದೇಶಕ್ಕೆ ಮರಳುವ ಸಿದ್ಧತೆಯಲ್ಲಿರುವರು.
50ರಿಂದ 60ರಷ್ಟಿರುವ ಯುರೋಪಿಯನ್ ಪ್ರವಾಸಿಗರ ಮೇಲೆ ಪ್ರಸ್ತುತ ಯುದ್ಧ ಹೆಚ್ಚಿನ ಪರಿಣಾಮ ಬೀರಿದ ಲಕ್ಷಣಗಳಿಲ್ಲ. ಹೀಗಾಗಿ ಇವರು ಎಂದಿನಂತೆ ಮಾರ್ಚ್ ಅಂತ್ಯದಿಂದ ಏಪ್ರಿಲ್ ಮೊದಲ ವಾರದೊಳಗೆ ನಿರ್ಗಮಿಸುವ ಸಿದ್ಧತೆಯಲ್ಲಿದ್ದಾರೆ.
ಇಲ್ಲಿನ ಮುಖ್ಯ ಬೀಚ್‌ಗಳಿಗೆ ಭೇಟಿಯಿತ್ತ ಎಎಸ್‌ಐ ಯಲ್ಲಪ್ಪ ಕಾಗವಾಡ ಮತ್ತು ಪೊಲೀಸ್ ವಿಶೇಷ ಬಾತ್ಮಿದಾರರಾದ ವಸಂತ ನಾಯ್ಕ ವಿದೇಶಿಯರ ವೀಸಾ ಅವಧಿ, ಪಾಸ್‌ಪೋರ್ಟ್ ಮತ್ತಿತರ ಅಗತ್ಯ ಮಾಹಿತಿಯನ್ನು ಕಲೆ ಹಾಕಿದರು.
ಇಸ್ರೇಲಿಗರನ್ನು ಹೊರತು ಪಡಿಸಿದರೆ ಯುರೋಪಿನ ಪ್ರವಾಸಿಗರು ಇಲ್ಲಿನ ಹೋಟೆಲ್, ಬೀಚ್‌ಗಳು ಮತ್ತಿತರ ಸ್ಥಳಗಳಲ್ಲಿ ಎಂದಿನಂತೆ ತಮ್ಮ ಸಾಮಾನ್ಯ ದಿನಚರಿಯಲ್ಲಿದ್ದಾರೆ.