ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಗಳೂರು ಹೈಕೋರ್ಟ್ ಪೀಠ ಸ್ಥಾಪಿಸಿ, ಅದಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸಲು ಪ್ರಸ್ತಾವನೆ ಸಿದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಧಾರವಾಡ ವ್ಯಾಪ್ತಿಯಲ್ಲೇ ಮುಂದುವರೆಸಲು ಉತ್ತರ ಕನ್ನಡ ಜಿಲ್ಲಾ ವಕೀಲರ ಸಂಘ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಆ. 15ರಂದು ಉಸ್ತುವಾರಿ ಸಚಿವರಲ್ಲಿ ಚರ್ಚಿಸಿದ್ದೆ. ನಂತರ ಈ ವಿಷಯವಾಗಿ ಗೃಹ ಸಚಿವರಿಗೆ ಹಾಗೂ ರಾಜ್ಯಪಾಲರಿಗೂ ಮನವಿ ಮಾಡಿದ್ದೆ. ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆ. ಮಂಗಳೂರಿಗೆ ಸ್ಥಳಾಂತರ ಮಾಡಿದರೆ, ಸಾರ್ವಜನಿಕರಿಗೆ ದೂರದ ಪ್ರಯಾಣ ಮಾಡ ಬೇಕಾಗಿರುವುದರಿಂದ, ಸಮಯ ವ್ಯರ್ಥವಾಗಲಿದೆ. ಆರ್ಥಿಕ ಹೊರೆಯೂ ಆಗಲಿದೆ. ಜಿಲ್ಲೆಯ ಭೌಗೋಳಿಕ, ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯನ್ನು ಉಚ್ಚ ನ್ಯಾಯಾಲಯದ ಪೀಠ ಧಾರವಾಡದಲ್ಲಿಯೇ ಮುಂದುವರಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಉಚ್ಚ ನ್ಯಾಯಾಲಯಕ್ಕೆ ಮರು ಪರಿಶೀಲನೆಗೆ ಬರೆಯಲು ಕಾನೂನು ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.