

ಗೋಕರ್ಣ: ಇಲ್ಲಿನ ತದಡಿ ಬಂದರಿನಲ್ಲಿ ಪರ್ಸೀನ್ ಬೋಟ್ ಒಂದರಲ್ಲಿ ಸಂಗ್ರಹಗೊಂಡ ಕೊಳೆತ ಮೀನುಗಳ ಕಲ್ಮಷಭರಿತ ನೀರನ್ನು ಸ್ವಚ್ಛಗೊಳಿಸುವ ವೇಳೆ ಅಲ್ಲಿನ ವಿಷಪೂರಿತ ಗಾಳಿ ಸೇವನೆಯಿಂದ ಮೂವರು ಮೀನುಗಾರರು ಸಾವಿಗೀಡಾಗಿ ಓರ್ವ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.ಮೃತರನ್ನು ಹತ್ತಿರದ ಕಾಗಾಲ ಗ್ರಾಮದವರಾದ ಹಿಣಿಯ ನೌಶಾದ್ ಅಲಿಷಾ ರಾಜಾ(48) ಮತ್ತು ಅಮೀರ್ ಅಬ್ದುಲ್ ಉಂಚಳ್ಳಿ(40) ಹಾಗೂ ವನ್ನಳ್ಳಿಯ ಅಮನ್ ಯಾಕೂಬ್ ಲಂಗಡೊ(26) ಎಂದು ಗುರುತಿಸಲಾಗಿದೆ.
ಹಿನ್ನೆಲೆ:ವನ್ನಳ್ಳಿಯ ಖಾಸಿಂ ಎನ್ನುವವರಿಗೆ ಸೇರಿದ ಖುಝೈಮಾ ಹೆಸರಿನ ಪರ್ಸೀನ್ ಬೋಟ್ನಲ್ಲಿ ಮೀನುಗಾರಿಕೆಯಿಂದ ತರಲಾದ ಚಮನ್ ಮೀನುಗಳನ್ನು ಐವರು ಸೇರಿ ಬೊಕ್ಸ್ಗಳಿಂದ ಖಾಲಿ ಮಾಡಿದ್ದರು.ನಂತರ ಬೋಟ್ ಒಳಗಿಳಿದು ತಳದಲ್ಲಿ ಮೀನಿನೊಂದಿಗೆ ಸಂಗ್ರಹಗೊಂಡಿದ್ದ ಕಲ್ಮಷಭರಿತ ನೀರನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಓರ್ವ ಮುಂದಾದಾಗ ಆತ ಅಸ್ವಸ್ಥಗೊಂಡು ಕೆಳಕ್ಕೆ ಕುಸಿದು ಬಿದ್ದ ಎನ್ನಲಾಗಿದೆ.ಇದನ್ನು ಬೋಟ್ ಮೇಲಿದ್ದ ನಾಲ್ವರು ನೋಡಿ ಆತನನ್ನು ರಕ್ಷಿಸಲು ಬೋಟ್ ಕೆಳಗಿಳಿದಾಗ ಅವರು ಕೂಡಾ ವಿಷಾನಿಲದ ಪ್ರಭಾವದಿಂದ ಅಸ್ವಸ್ಥರಾದರು.ಇವರೆಲ್ಲರನ್ನು ಖಾಸಗಿ ಅಂಬ್ಯುಲೆನ್ಸ್ ಮೇಲೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತು.ಅಲ್ಲಿ ಚಿಕಿತ್ಸೆ ಫಲಕಾರಿಯಾದೆ ಮೂವರು ಮೃತರಾದರು.ಇನ್ನಿಬ್ಬರ ಪೈಕಿ ಓರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದೆ.ಓರ್ವನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.ದುರ್ಘಟನಾ ಸ್ಥಳಕ್ಕೆ ಪೊಲೀಸ್ ಇನಸ್ಪೆಕ್ಟರ್ ಶ್ರೀಧರ ಎಸ್.ಆರ್. ಮತ್ತು ಸಿಬ್ಬಂದಿ ತಕ್ಷಣ ಆಗಮಿಸಿ ಅಗತ್ಯ ಸಹಾಯ ಒದಗಿಸಿದರು.ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.