ಹಳಿಯಾಳ:ಯಾವುದೇ ಪರವಾನಿಗೆ ಇಲ್ಲದೇ ಪಟ್ಟಣದ ಮೇದಾರಗಲ್ಲಿ ಮತ್ತು ಕುಂಬಾರಗಲ್ಲಿಯ ತಾಲಿಮ್ ಕೂಟ್‌ನಲ್ಲಿ ಅಳವಡಿಸಲಾಗುತ್ತಿದ್ದ (Tippu) ಟಿಪ್ಪು ಸುಲ್ತಾನ್ ದಿ ಕಿಂಗ್ ಆಫ್ ಟೈಗರ್ ಎಂದು ಬರೆದ ಬ್ಯಾನರ್ ಒಂದು ಪಟ್ಟಣದಲ್ಲಿ ಗುರುವಾರ ಸಂಜೆ ವಿವಾದದ ಕಿಡಿ ಹೊತ್ತಿಸಿದೆ.
ಮೇದಾರಗಲ್ಲಿ, ಕುಂಬಾರಗಲ್ಲಿ ಮತ್ತು ಗಣಪತಿ ಗಲ್ಲಿಯ ಮೂರು ಗಲ್ಲಿಗಳು ಕೂಡುವ ತಾಲೀಮ್ ಕೂಟ್‌ನಲ್ಲಿಯ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ದೊಡ್ಡ ಗಾತ್ರದ ಕಟೌಟ್ ತೆರವುಗೊಳಿಸುವಂತೆ ಪುರಸಭೆಗೆ ಮೌಖಿಕವಾಗಿ ಹಲವು ಹಿಂದು ಸಂಘಟನೆ ದೂರು ನೀಡಿದ್ದರೆಂದು ತಿಳಿದು ಬಂದಿದೆ.
ಈ ಹಿನ್ನೆಲೆ ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬ್ಯಾನರ್ ತೆರವುಗೊಳಿಸುವಂತೆ ತಿಳಿಸಿದಾಗ ಯುವಕರು ಅದನ್ನು ಮನೆ ಎದುರು ಅಳವಡಿಸಲು ಮುಂದಾದರು.
ಅದಕ್ಕೂ ಪರವಾನಿಗೆ ಬೇಕು ಎಂದು ಸಿಬ್ಬಂದಿ ಎಷ್ಟೇ ತಿಳಿ ಹೇಳಿದರು.
ಕೇಳದ ಯುವಕರ ಗುಂಪು ಟಿಪ್ಪು ಸುಲ್ತಾನ್ ಸ್ವಾತಂತ್ರೃ ಹೋರಾಟಗಾರ, ಅವರ ಬ್ಯಾನರ್ ಅಳವಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರ ವಿವರ ನೀಡಿ ಮತ್ತು ಯಾವ ಅಧಿಕಾರಿಯ ಆದೇಶದ ಮೇರೆಗೆ ತಾವು ಇಲ್ಲಿ ಬಂದಿದ್ದೀರಿ ಅವರನ್ನು ಕರೆಸುವಂತೆ ಪಟ್ಟು ಹಿಡಿದರು.
ಪುರಸಭೆ ಸಿಬ್ಬಂದಿ ಪಿಎಸ್‌ಐ ಕೃಷ್ಣಗೌಡ ಅರಕೇರಿ ಮತ್ತು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ ಗಮನಕ್ಕೆ ತಂದಾಗ, ಸ್ಥಳಕ್ಕೆ ಆಗಮಿಸಿ ಯುವಕರಿಗೆ ವಿಷಯದ ಗಂಭೀರತೆ ಹಾಗೂ ನಿಯಮಾವಳಿಗಳ ಬಗ್ಗೆ ತಿಳಿ ಹೇಳಿ ಬ್ಯಾನರ್ ತೆರವುಗೊಳಿಸಿದರು.
ತೆರವು ಆಕ್ಷೇಪಿಸಿದ್ದ ಯುವಕರ ಗುಂಪು ಯಾವುದೇ ಕಾರಣಕ್ಕೂ ತಾವೆಲ್ಲರೂ ಪರವಾನಿಗೆ ಪಡೆದು ಬ್ಯಾನರ್ ಅಳವಡಿಸಿಯೆ ತೀರುತ್ತೇವೆ ಎಂದು ಘೋಷಿಸಿದ್ದು, ಸಧ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಬ್ಯಾನರ್ ಅಳವಡಿಸಿದ್ದ ಯುವಕರು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಹಾಗೂ ಘೋಷಣೆಗಳ ಕೂಗಾಟ ನಡೆಯಿತು.
ಕೂಡಲೇ ಪಿಎಸ್‌ಐ ಕೃಷ್ಣ ಅವರು ಜಮಾವಣೆಗೊಂಡಿದ್ದ ಸಾರ್ವಜನಿಕರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರಲ್ಲದೇ ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.