ಶಿರಸಿ:ಉತ್ತರಕನ್ನಡ ಜಿಲ್ಲೆ ಬಹಳಷ್ಟು ಯೋಜನೆಯ ಭಾರ ಹೊತ್ತಿದೆ. ಈಗ ಮತ್ತೂ ಭಾರ ತೆಗೆದುಕೊಳ್ಳಲು ಭೂಮಿ ಹಾಗೂ ಜನರಿಗೆ ಸಾಧ್ಯವಿಲ್ಲ.
ಆದ್ದರಿಂದ ನದಿ ತಿರುವು (River Project) ಯೋಜನೆ ವಿರೋಧಿಸಿದ್ದೇನೆ ಎಂದು ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದರು.
ನಗರದ ರಾಜದೀಪ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘಕ್ಕೆ ಮಂಗಳವಾರ ಅವರು ಭೇಟಿ ನೀಡಿ, ಮಾಧ್ಯಮದವರ ಜತೆ ಮಾತನಾಡಿದರು. ಕೈಗಾ ಅಣು ವಿದ್ಯುತ್ ಯೋಜನೆ , ಸೀಬರ್ಡ್ ನೌಕಾ ಯೋಜನೆ , ವಿವಿಧ ಅಣೆಕಟ್ಟೆಗಳು, ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಯಿಂದ ಬಹಳಷ್ಟು ಜನರು ಭೂಮಿ ಕಳೆದುಕೊಂಡಿದ್ದರು.
ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಸಹಕಾರದಿಂದ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಬೇಡ್ತಿ-ಅಘನಾಶಿನಿ ನದಿಗೆ ಅಣೆಕಟ್ಟೆ ನಿರ್ಮಿಸುವ ಯೋಜನೆಗೂ ನಾನು ವಿರೋಧಿಸಿದ್ದೆ. ಆದರೆ, ಯೋಜನೆಗಳ ವಿರೋಧಿ ನಾನಲ್ಲ ಎಂದರು.
1978ರ ಅಕ್ಟೋಬರ್ ಪೂರ್ವದಲ್ಲಿ ಅತಿಕ್ರಮಣ ಮಾಡಿಕೊಂಡವರನ್ನು ಒಕ್ಕಲೆಬ್ಬಿಸಬಾರದು ಎಂಬ ಎಂಬ ಸರ್ಕಾರದ ಆದೇಶ ಇನ್ನೂ ಜೀವಂತವಿದೆ. ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ.
ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಹಳೆಯ ಅತಿಕ್ರಮಣ ತೆರವುಗೊಳಿಸಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತು ಪ್ರತಿಕ್ರಿಯಿಸಿದ ದೇಶಪಾಂಡೆ, ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ನಾನು ಇಲ್ಲ. ಹೈಕಮಾಂಡ್ ಹೇಳುವ ರೀತಿಯಲ್ಲಿ ಕೇಳುತ್ತೇವೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ಹೈಕಮಾಂಡ್ ನಿರ್ಣಯ ಮಾಡಬೇಕು. ಶಾಸಕರಿಗೆ ಸಚಿವ ಆಗುವ ಅವಕಾಶವಿದೆ. ಅದರಲ್ಲಿ ದ್ವಂದವಿಲ್ಲ ಎಂದರು.