Bhuvaneshwari ಉಕದಲ್ಲೇ ಇದೆ ಭುವನೇಶ್ವರಿಯ ಮತ್ತೊಂದು ದೇವಸ್ಥಾನ

ಮಾವಳ್ಳಿಯ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಪ್ರತಿಷ್ಠಾಪನೆಗೊಂಡ (bhuvaneshwari) ಭುವನೇಶ್ವರಿ ದೇವಿಯ ಮೂರ್ತಿ.
ಮಾವಳ್ಳಿಯ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಪ್ರತಿಷ್ಠಾಪನೆಗೊಂಡ (bhuvaneshwari) ಭುವನೇಶ್ವರಿ ದೇವಿಯ ಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ಇತಿಹಾಸದ ಕತೆ ಹೇಳುತ್ತಿವೆ ಕನ್ನಡಗಲ್ ಭಾಗದ ಕಲ್ಲು-ಶಾಸನ- ಭಿನ್ನ ಮೂರ್ತಿಗಳು
  • ಒಂದೆರಡು ವರ್ಷದಲ್ಲಿ ದೇವಾಲಯ ಜೀರ್ಣೋದ್ಧಾರ
  • ವಾಲಖಿಲ್ಯ ಮುನಿಗಳಿಂದ ತಾಯಿ ಭುವನೇಶ್ವರಿಯ ಪೂಜೆ
ಯಲ್ಲಾಪುರ: ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ನವೆಂಬರ್ ತಿಂಗಳಲ್ಲಿ (Bhuvaneshwari) ತಾಯಿ ಭುವನೇಶ್ವರಿ ದೇವಿಯನ್ನು ಅನೇಕ ಕಡೆ ಸ್ತುತಿಸಲಾಗುತ್ತದೆ.
ಭುವನೇಶ್ವರಿಯ ಅತ್ಯಂತ ಹಳೆಯ ಮಂದಿರ ಇರುವುದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ.
ಅಲ್ಲಿ ಭುವನೇಶ್ವರಿ ದೇವಿಗೆ ಆಲಯ ನಿರ್ಮಿಸಿದ ಅಗಸ್ತ್ಯ ಮುನಿಗಳೇ ಸ್ಥಾಪಿಸಿದ ಇನ್ನೊಂದು ಭುವನೇಶ್ವರಿ ದೇವಿ ಯಲ್ಲಾಪುರ ತಾಲೂಕು ಕನ್ನಡಗಲ್ ಭಾಗದಲ್ಲಿ ಇತ್ತು ಎನ್ನುವುದಕ್ಕೆ ಸಾಕ್ಷೃಗಳು ಸಿಕ್ಕಿವೆ.
ಎಲ್ಲವೂ ಸರಿ ಹೋದರೆ, ಒಂದೆರಡು ವರ್ಷದಲ್ಲಿ ದೇವಾಲಯ ಜೀರ್ಣೋದ್ಧಾರಗೊಳ್ಳಲಿದೆ.
ತಾಲೂಕಿನ ಕನ್ನಡಗಲ್ ಗ್ರಾಮದ ಸುತ್ತಮುತ್ತ ದೊರೆತಿರುವ ಶಿಲಾ ಶಾಸನಗಳು, ವೀರಗಲ್ಲುಗಳು ನಮ್ಮ ಪರಂಪರೆಯ ಭವ್ಯ ಇತಿಹಾಸವನ್ನು ಸಾರಿ ಹೇಳುತ್ತಿವೆ.
ಅದರಲ್ಲಿ ಅತ್ಯಂತ ವಿಶಿಷ್ಟ ಎನಿಸುವುದು ಭುವನೇಶ್ವರಿ ದೇವಸ್ಥಾನ ಮತ್ತು ಅದರ ಐತಿಹ್ಯಗಳು.
ವಿಷ್ಣುವಿನ ನಾಭಿಯಿಂದ ಬ್ರಹ್ಮನ ಜನನದ ಸಂದರ್ಭದಲ್ಲಿ ಬಿದ್ದ ನೀರು ‘ಅಘನಾಶಿನಿ’ ಎಂಬ ಹೆಸರು ಪಡೆದು ನದಿಯಾಗುತ್ತದೆ.
ಆ ನದಿಯ ನೀರಿನಿಂದ ಜನ್ಮ ತಳೆದ ಅಗಸ್ತ್ಯ ಮುನಿಗಳು ತನಗೆ ತಾಯಿ ಬೇಕೆಂಬ ಕಾರಣಕ್ಕೆ ದೇವಿಯ ಕುರಿತು ತಪಸ್ಸು ಮಾಡುತ್ತಾರೆ.
ಅಗ್ನಿಯ ಮೂಲಕ ಭುವನೇಶ್ವರಿ ದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ.
ಭೂಮಿಯಿಂದ ಜನಿಸಿದ ಆಕೆ ಭುವನೇಶ್ವರಿಯಾಗುತ್ತಾಳೆ. ಅವಳ ದೇವಸ್ಥಾನ (ಸಿದ್ದಾಪುರ ತಾಲೂಕಿನ) ಭುವನಗಿರಿಯಾಗಿ ಪ್ರಸಿದ್ಧಿ ಪಡೆಯುತ್ತದೆ.
ಅಗಸ್ತ್ಯ ಮುನಿ ತಮ್ಮ ಯತ್ರೆ ಮುಂದುವರಿಸುವ ದೃಷ್ಟಿಯಿಂದ ಭುವನೇಶ್ವರಿ ದೇವಿಗೆ 5 ಕಡೆಗಳಲ್ಲಿ ದೇಗುಲಗಳನ್ನು ನಿರ್ಮಿಸಿ, ತಮ್ಮ ಶಿಷ್ಯರಿಗೆ ದೇವಿಯ ಆರಾಧನೆಯ ಹೊಣೆ ವಹಿಸಿ ಹೊರಡುತ್ತಾರೆ.
ಅದರಲ್ಲಿ ಯಲ್ಲಾಪುರ ತಾಲೂಕು ಕನ್ನಡಗಲ್ ಬಳಿಯ ಮಾವಳ್ಳಿ ಭುವನೇಶ್ವರಿ ದೇವಸ್ಥಾನವೂ ಒಂದು.
ಇಲ್ಲಿ ಅಗಸ್ತ್ಯರ ಶಿಷ್ಯರಾದ ವಾಲಖಿಲ್ಯ ಮುನಿಗಳು ದೇವಿಯ ಪೂಜೆಯೊಂದಿಗೆ ತಪಸ್ಸನ್ನಾಚರಿಸಿದ್ದಾರೆಂಬ ಇತಿಹಾಸವಿದೆ.
ಅದು ಕ್ರಿ.ಪೂ. 6ನೇ ಶತಮಾನದ ಸಂದರ್ಭ. ಆಗ ಜೈನ ಧರ್ಮ ಮತ್ತು ಭೌದ್ಧ ಧರ್ಮದ ಪ್ರಭಾವ ಹೆಚ್ಚಾಗಿರುತ್ತದೆ.
ಜೈನ ಭಿಕ್ಷುಕರು ಅತಿಯಾಗಿ ಧರ್ಮ ಪ್ರಚಾರ ಮಾಡುತ್ತಿರುತ್ತಾರೆ. ಆಗ ವಾಲಖಿಲ್ಯ ಋಷಿಯು ಕರಾವಳಿ ದೇಶವನ್ನು ಆಳುತ್ತಿದ್ದ 5ನೇ ವಿಕ್ರಮಾದಿತ್ಯ ರಾಜನನ್ನು ಭೇಟಿಯಾಗಿ ಸನಾತನ ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರೆ ಉಪಟಳ ಕಡಿಮೆ ಆಗುತ್ತದೆ ಎಂದು ಸಲಹೆ ನೀಡುತ್ತಾರೆ.
ಅದರಂತೆ ರಾಜ ಹಿಂದು ಧರ್ಮದ ಪ್ರಚಾರ ಕೈಗೊಳ್ಳುತ್ತಾನೆ. ಒಮ್ಮೆ 5ನೇ ವಿಕ್ರಮಾದಿತ್ಯನ ರಾಜ್ಯದ ಮೇಲೆ ಶತ್ರುಗಳು ಆಕ್ರಮಣ ಮಾಡಿದಾಗ ರಾಜನ ಸೈನ್ಯಕ್ಕೆ ಯುದ್ಧದಲ್ಲಿ ಸೋಲಿನ ಭೀತಿ ಎದುರಾಗುತ್ತದೆ.
ಆಗ ವಾಲಖಿಲ್ಯ ಮುನಿಗಳ ಮೊರೆ ಹೋಗುತ್ತಾನೆ. ಮುನಿಗಳ ಶಿಷ್ಯರ ನೆರವಿನಿಂದ ಯುದ್ಧದಲ್ಲಿ ಗೆಲುವು ಸಾಧಿಸುತ್ತಾನೆ. ಅದರಿಂದ ಸಂತೋಷಗೊಂಡ ರಾಜನು ಭುವನೇಶ್ವರಿ ದೇವಸ್ಥಾನವನ್ನು ಒಳಗೊಂಡಂತೆ ಮಾವಳ್ಳಿ ಸುತ್ತಮುತ್ತಲಿನ ಊರನ್ನು ಹೊಂದಿದ್ದ ‘ಯಶಸ್ವಿಪುರ’ ಎಂಬ ಗ್ರಾಮವನ್ನು ಮುನಿಗಳಿಗೆ ಉಡುಗೊರೆಯಾಗಿ ನೀಡುತ್ತಾನೆ.
‘ಯಶಸ್ವಿಪುರ’ವನ್ನೇ ತನ್ನ ಕರಾವಳಿ ದೇಶದ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ ಎಂಬ ವಿಚಾರ ದಾಖಲೆಗಳ ಮೂಲಕ ತಿಳಿದು ಬರುತ್ತದೆ. ಮುಂದೆ ರಾಜಮನೆತನಗಳು, ಜೈನ, ವೀರಶೈವ ಹಾಗೂ ಮರಾಠಾ ಪರಂಪರೆಗಳ ನಡುವೆ ನಡೆದ ಸಂಘರ್ಷದಲ್ಲಿ ಭುವನೇಶ್ವರಿ ದೇವಾಲಯದ ಕೆಲ ಭಾಗಗಳು ನಾಶವಾದವು.
ನಂತರ ಬಂದ ಮುಸ್ಲಿಮರ ಆಳ್ವಿಕೆಯಲ್ಲಿ ದೇವಾಲಯ ಸಂಪೂರ್ಣ ನಾಶ ಹೊಂದಿತೆಂಬುದು ಇತಿಹಾಸದಿಂದ ಗೊತ್ತಾಗುತ್ತದೆ.

ವಿಸ್ತಾರವಾದ ಭುವನೇಶ್ವರಿ ದೇವಾಲಯ

ಮಾವಳ್ಳಿಯ ಭುವನೇಶ್ವರಿ ದೇವಿಯ ದೇಗುಲ ಬಹು ವಿಸ್ತಾರವಾಗಿತ್ತೆಂಬ ಉಲ್ಲೇಖವಿದೆ.
ದೇವಾಲಯದ ಸುತ್ತಲೂ ಅಪರೂಪದ ಕೆತ್ತನೆಗಳನ್ನು ಹೊಂದಿದ ಶಿಲ್ಪಗಳು ಕಲಾಕಾರರ ಕೌಶಲ ಬಿಂಬಿಸುತ್ತಿದ್ದವು.
ಕುದುರೆ ಮೇಲೇರಿ ದೇವಾಲಯದ ಪ್ರಾಂಗಣ ಸುತ್ತಾಡಲು ಹೊರಟರೆ ಒಂದು ಹಗಲು, ಒಂದು ರಾತ್ರಿ ಸಮಯ ಬೇಕಾಗುವಷ್ಟು ದೊಡ್ಡದಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.
ಶತಮಾನಗಳ ಹಿಂದೆಯೇ ಮಣ್ಣಿನಡಿ ಹುದುಗಿ ಹೋಗಿದ್ದ ದೇವಸ್ಥಾನದ ಕುರುಹುಗಳು ಇತ್ತೀಚೆಗೆ ಪತ್ತೆಯಾಗಿದೆ.
ಜ್ಯೋತಿಷ, ಪ್ರಶ್ನೆಯ ಮೂಲಕ ಇದೀಗ ದೇವಸ್ಥಾನದ ಅಸ್ತಿತ್ವ ತಿಳಿಯುತ್ತಿದ್ದಂತೆ ಗ್ರಾಮಸ್ಥರು ದೇವಸ್ಥಾನಕ್ಕೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ.
ಕಳೆದ ಫೆಬ್ರವರಿ-ಮಾರ್ಚ್ ವೇಳೆಗೆ ಭುವನೇಶ್ವರಿ ದೇವಿಯ ವಿಗ್ರಹವನ್ನು ಮಾವಳ್ಳಿಯ ಗ್ರಾಮದೇವಿ ದೇವಸ್ಥಾನದ ಆವಾರದಲ್ಲಿ ಪ್ರತಿಷ್ಠಾಪಿಸಲಾಗಿದೆ.
ನೂತನ ದೇಗುಲ ನಿರ್ಮಿಸಿ, ಮತ್ತೊಮ್ಮೆ ಭುವನೇಶ್ವರಿ ದೇವಿ ಮಾವಳ್ಳಿಯಲ್ಲಿ ನೆಲೆನಿಂತು ಅನುಗ್ರಹಿಸುವಂತೆ ಮಾಡಲು ಗ್ರಾಮಸ್ಥರು ಉತ್ಸುಕರಾಗಿದ್ದಾರೆ.
ಕನ್ನಡಗಲ್, ಮಾವಳ್ಳಿ, ಚಿಕ್ಕಮಾವಳ್ಳಿ ಭಾಗದಲ್ಲಿ ಹಿಂದು, ಜೈನ ಹಾಗೂ ವೀರಶೈವ ಪರಂಪರೆಯನ್ನು ಸಾರುವ ಅನೇಕ ಕುರುಹುಗಳಿದ್ದು, ಸಮರ್ಪಕವಾದ ಅಧ್ಯಯನ ನಡೆದಾಗ ಮಾತ್ರ ಇತಿಹಾಸದ ಸಂಪೂರ್ಣ ಚಿತ್ರಣ ದೊರೆಯಲಿದೆ. ಇದರಲ್ಲಿ ಸರ್ಕಾರ ಆಸಕ್ತಿ ವಹಿಸಲಿ ಎನ್ನುವುದು ಗ್ರಾಮಸ್ಥರ ಬೇಡಿಕೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net