ಕನ್ನಡಗಲ್ ಕಾಡಿನ ಭೂಗರ್ಭದ ರಹಸ್ಯ..!

ಯಲ್ಲಾಪುರ ತಾಲೂಕಿನ ಚಿಕ್ಕಮಾವಳ್ಳಿ ಕನ್ನಡಗಲ್ ಬಳಿ ಶಾಸನಗಳ ಕುರಿತು ಮಾಹಿತಿ ನೀಡುತ್ತಿರುವ ಡಾ.ಸಂಗಮೇಶ ಕಲ್ಯಾಣಿ
ಯಲ್ಲಾಪುರ ತಾಲೂಕಿನ ಚಿಕ್ಕಮಾವಳ್ಳಿ ಕನ್ನಡಗಲ್ ಬಳಿ ಶಾಸನಗಳ ಕುರಿತು ಮಾಹಿತಿ ನೀಡುತ್ತಿರುವ ಡಾ.ಸಂಗಮೇಶ ಕಲ್ಯಾಣಿ
Published on

ಪ್ರಮುಖ ಮುಖ್ಯಾಂಶಗಳು

  • ಅಶುಭ ಸಂಕೇತಗಳಿಂದ ಕಂಗೆಟ್ಟಿದ್ದ ಗ್ರಾಮಸ್ಥರು
  • ಪ್ರಶ್ನಾ ಜ್ಯೋತಿಷ, ಸಂಶೋಧನೆಯಿಂದ ಸಿಕ್ಕಿತು ಉತ್ತರ
  • ವೀರಗಲ್ಲು, ಶಾಸನ, ದೇವಾಲಯ ಕುರುಹು ಪತ್ತೆ
ಯಲ್ಲಾಪುರ: ಊರಿನಲ್ಲಿ ಅಶುಭ ಸಂಕೇತಗಳು ಕಂಡುಬಂದಿದ್ದರಿಂದ ಆತಂಕಗೊಂಡ ಜನರು, ತಜ್ಞರನ್ನು ಕರೆಸಿ ತೋರಿಸಿದಾಗ ಭವ್ಯ ಇತಿಹಾಸವೊಂದರ ಕುರುಹುಗಳು ಅನಾವರಣಗೊಂಡ ವಿದ್ಯಮಾನ ತಾಲೂಕಿನ ಕನ್ನಡಗಲ್ ಗ್ರಾಮ ವ್ಯಾಪ್ತಿಯ ಹಳ್ಳಿಗಳಲ್ಲಿ ನಡೆದಿದ್ದು, ತೀವ್ರ ಕುತೂಹಲ ಮೂಡಿಸಿವೆ.
ಕನ್ನಡ ತಾಯಿ ಭುವನೇಶ್ವರಿಯ ದೇವಾಲಯ ಇತ್ತು ಎನ್ನುವುದೂ ಪತ್ತೆಯಾಗಿದ್ದು, ತಾತ್ಕಾಲಿಕವಾಗಿ ಭುವನೇಶ್ವರಿ ಮೂರ್ತಿಯ ಪ್ರತಿಷ್ಠಾಪನೆಯನ್ನೂ ಗ್ರಾಮಸ್ಥರು ನೆರವೇರಿಸಿದ್ದಾರೆ.
ಆಗಿದ್ದು ಹೀಗೆ: ಗ್ರಾಮದಲ್ಲಿ ಅಶುಭ ಸೂಚನೆ, ಅಕಾಲಿಕ ಮರಣ, ಅಂಗವಿಕಲರ ಜನನ ಇತ್ಯಾದಿ ಸಂಕೇತಗಳು ಕಂಡು ಬಂದಿದ್ದರಿಂದ ಜನರು ದಿಗಿಲುಗೊಂಡಿದ್ದರು.
ಇದರ ಕಾರಣಗಳನ್ನು ತಿಳಿಯುವ ನಿಟ್ಟಿನಲ್ಲಿ ಪ್ರಶ್ನಾ ಜ್ಯೋತಿಷದ ಮೂಲಕ ವಿಶ್ಲೇಷಣೆ ಮಾಡುವ ತಜ್ಞೆ ಹಾಗೂ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿರುವ ಪಿರಿಯಾಪಟ್ಟಣದ ಆಶಾ ಎಂಬುವರನ್ನು ಕರೆಸಿದ್ದರು.
ಅವರು ಜನರಿಂದ ಪ್ರಶ್ನೆಗಳನ್ನು ಪಡೆದು ಅದಕ್ಕೆ ಉತ್ತರ ಶೋಧಿಸುತ್ತ ವಿಶ್ಲೇಷಣೆ ನಡೆಸಿ, ಸಮೀಪದ ಕಾಡುಗಳಲ್ಲಿ ದೇವಾಲಯದ ಕರುಹುಗಳು ಇವೆ.
ಅಲ್ಲಿ ಹಿಂದೆ ಪ್ರತಿಷ್ಠಾಪಿಸಿದ್ದ ದೇವರ ಮೂರ್ತಿಗಳು ನಿರ್ಲಕ್ಷದಿಂದ ವಿಸ್ಮತಿಗೆ ಒಳಗಾಗಿವೆ. ಹೀಗಾಗಿ ನಕಾರಾತ್ಮಕ ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದ್ದರು.
ಅವರು ಹೇಳಿದ ಕುರುಹುಗಳು ಊರಿನ ಕಾಡುಗಳಲ್ಲಿ ಪತ್ತೆಯಾದವು.
ಭಗ್ನಗೊಂಡಿರುವ ದೇವಾಲಯಗಳನ್ನು ಪಿರಿಯಾಪಟ್ಟಣದ ಆಶಾ ಅವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರಗೊಳಿಸುವ ಪ್ರಯತ್ನಆರಂಭವಾಗಿದೆ.
ತಾತ್ಕಾಲಿಕವಾಗಿ ಭುವನೇಶ್ವರಿ ದೇವಿಯ ಪ್ರತಿಷ್ಠಾಪನೆಯನ್ನು ಮಾವಳ್ಳಿ ಗ್ರಾಮದೇವಿ ಮಂದಿರ ಆವರಣದಲ್ಲಿ ನೆರವೇರಿಸಲಾಗಿದೆ.
ಪ್ರತ್ಯೇಕ ದೇವಾಲಯವ ನಿರ್ಮಿಸುವ ಆಲೋಚನೆ ಇದೆ ಎಂದು ಮಾವಳ್ಳಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ಗುರುಪಾದಯ್ಯ ನಂದೊಳ್ಳಿಮಠ ತಿಳಿಸಿದ್ದಾರೆ.
ಗ್ರಾಮಗಳಲ್ಲಿ ಕಂಡುಬಂದ ಅಶುಭ ಸಂಕೇತಗಳಿಗೆ ಕಾರಣ ತಿಳಿಯುವ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲ ಒಗ್ಗಟ್ಟಾಗಿ ಪ್ರಯತ್ನಿಸಿದಾಗ ಪ್ರಶ್ನಾವಳಿ ವೇಳೆ ಕಾಡಿನಲ್ಲಿ ಇರುವ ದೇವಾಲಯದ ಕುರುಹುಗಳ ಬಗ್ಗೆ ತಿಳಿಸಿರುವುದು, ಹುಡುಕಾಟ ನಡೆಸಿದಾಗ ಪ್ರಾಚೀನ ಕುರುಹುಗಳು ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವೀರಗಲ್ಲು, ಶಾಸನ, ದೇವಾಲಯ ಶೋಧ

ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಅವರ ನೇತೃತ್ವದಲ್ಲಿ ತಾಲೂಕಿನ ಕನ್ನಡಗಲ್ ಗ್ರಾಮದ ಚಿಕ್ಕಮಾವಳ್ಳಿ, ಮಾವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ದಿನಗಳಿಂದ ಸಂಶೋಧನೆ ನಡೆದಿದೆ.
ಈ ವೇಳೆ ಪುರಾತನ ಶಿಲ್ಪಕಲೆ, ಶಾಸನ, ದೇವಾಲಯದ ಕುರುಹು ಕಂಡು ಬಂದಿವೆಯಲ್ಲದೆ, ಶಾಸನ ಓದಿನಿಂದ ಇತಿಹಾಸದ ಅನೇಕ ಸಂಗತಿಗಳು ಅನಾವರಣಗೊಂಡಿವೆ.
ಚಿಕ್ಕಮಾವಳ್ಳಿ, ಮಾವಳ್ಳಿ ಸುತ್ತಲಿನ ಕಾಡಿನಲ್ಲಿ ತ್ರಿಭುವನ ಮಲ್ಲ ಎಂಬ ಬಿರುದು ಹೊಂದಿದ್ದ 5ನೇ ವಿಕ್ರಮಾದಿತ್ಯನ ಕಾಲದ ಯುದ್ಧದ ಸನ್ನಿವೇಶಗಳ ವೀರಗಲ್ಲುಗಳು, ಶಾಸನ ಸಿಕ್ಕಿವೆ.
ಬೊಮ್ಮಣ್ಣ ನಾಯ್ಕ, ಬಲ್ಲಾಳದೇವ, ತಮ್ಮಣ್ಣ ನಾಯ್ಕ, ಮದ್ವಿಜ ನಾಯಕ ಎಂಬವರ ಹೋರಾಟದ ಕಥೆಗಳು ಶಾಸನದಲ್ಲಿವೆ.
‘ಗೆದ್ದರೆ ಜಯ, ಸೋತರೆ ವೀರಮರಣ’ ಎಂಬ ಧ್ಯೇಯದ ವೀರಗಲ್ಲುಗಳಲ್ಲಿ ಯುದ್ಧದಲ್ಲಿ ಮಡಿದವರನ್ನು ವಾದ್ಯ, ಹಾಡು, ನರ್ತನದ ಮೂಲಕ ಮೆರವಣಿಗೆಯಲ್ಲಿ ಗೌರವಯುತವಾಗಿ ಸ್ವರ್ಗಕ್ಕೆ ಕಳುಹಿಸುವ ಚಿತ್ರಣ ಕೆತ್ತಲಾಗಿದೆ.
ಅಲ್ಲದೇ ನಂದಿ, ಈಶ್ವರ ಲಿಂಗ, ಪೂಜೆ ಸಲ್ಲಿಸುವುದು, ತಪಸ್ಸಿಗೆ ಕುಳಿತ ಜೈನಮುನಿಗಳ ಚಿತ್ರಗಳಿವೆ.
ಇನ್ನೊಂದೆಡೆ ಭುವನೇಶ್ವರಿ ದೇವಸ್ಥಾನದ ಕುರುಹು, ಕರ್ಣಮುಚ್ಚುಗೆ, ಕಲ್ಯಾಣಿ, ನಂದಿ ವಿಗ್ರಹಗಳು ವಿರೂಪವಾದ ಸ್ಥಿತಿಯಲ್ಲಿ ಕಂಡು ಬಂದಿವೆ.
ಅಗಸ್ತ್ಯ ಮುನಿ, ಅವರ ಶಿಷ್ಯ ವಾಲಖಿಲ್ಯ ಮುನಿಗಳಿಂದ ಈ ಭಾಗದಲ್ಲಿ ಭುವನೇಶ್ವರಿಯ ಮಂದಿರ ಸ್ಥಾಪನೆ, ಆರಾಧನೆ ನಡೆದಿರುವ ಬಗ್ಗೆ ಕುರುಹುಗಳು ಲಭ್ಯವಾಗಿವೆ ಎಂದು ಡಾ. ಸಂಗಮೇಶ ಅವರು ಅಧ್ಯಯನ ಮಾಡಿ ವಿವರಿಸಿದ್ದಾರೆ.
ಭಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಸ್ಥಳೀಯರಾದ ಶೇಷಗಿರಿ ಹೆಗಡೆ, ನಾಗರಾಜ ಹೆಗಡೆ, ಎಂ.ಎಸ್. ಹೆಗಡೆ, ಗಣಪತಿ ಹೆಗಡೆ, ಸಿದ್ದಾರ್ಥ ನಂದೊಳ್ಳಿಮಠ, ಗಣಪತಿ ಮರಾಠಿ, ದೀಪಕ ನಾಯ್ಕ, ಅಕ್ಷಯ ಮರಾಠಿ, ನಾಗರಾಜ ನಾಯ್ಕ, ಸಂತೋಷ ಗುಡಿಗಾರ, ನಂದೀಶ ಮರಾಠಿ, ವಿಘ್ನೇಶ್ವರ ಹೆಗಡೆ ಇತರರು ಶಾಸನ ಓದುವಿಕೆ ವೇಳೆ ಹಾಜರಿದ್ದು ಸಹಕರಿಸಿದರು.
ಭುವನೇಶ್ವರಿ ತಾಯಿ ಈ ಭಾಗದ ಮೂಲ ದೇವರೆಂಬ ಬಗ್ಗೆಯೂ ದಾಖಲೆಗಳು ದೊರೆತಿವೆ.
ಕನ್ನಡದ ಶಾಸನಗಳು ಪಾಳು ಬಿದ್ದಿದ್ದು, ಅವುಗಳ ಉತ್ಖನನ, ಸಂಶೋಧನೆ, ಅಧ್ಯಯನ ಮಾಡಿ ಸಂರಕ್ಷಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಾಗಿದೆ.
"

ಕಳೆದ ಕೆಲವು ತಿಂಗಳಿಂದ ಈ ಭಾಗದ ಶಾಸನಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಜೈನ, ಶೈವ ಶಾಸನಗಳು ಹೇರಳವಾಗಿವೆ. ತ್ರಿಭುವನ ಮಲ್ಲ ಬಿರುದಾಂಕಿತ ವಿಕ್ರಮಾದಿತ್ಯನ ಶಾಸನಗಳು ಅರಣ್ಯ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿವೆ. ಇವುಗಳ ಅಧ್ಯಯನ, ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ಭಾಗದಲ್ಲಿ ಭುವನೇಶ್ವರಿಯ ಕ್ಷೇತ್ರ ಪ್ರತೀತಿ ಹೊಂದುವ ರೀತಿಯಲ್ಲಿ ಮರುಸ್ಥಾಪನೆ ಆಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net